ಸೆ.20 ರಂದು  ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

ಚಿತ್ರದುರ್ಗ, ಸೆ.16: ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕನೇ ಭಾರೀ ಕೊಟ್ಟ ಮಾತನ್ನು ತಪ್ಪಿದ್ದು, ಅವರ ಮನೆಯ ಮುಂಭಾಗದಲ್ಲಿ ಸೆ.20 ರಂದು ಲಿಂಗಾಯತ ಪಂಚಮಸಾಲಿ ಸಮುದಾಯದ ಭಾಂದವರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದೆವೆ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಗಂಗಾಧರಪ್ಪ‌ ಹೇಳಿದರು.ನಗರದ ಪತ್ರಿಕಾಭವನದಲ್ಲಿ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಜಿಯವರು 2ಎ ಮೀಸಲಾತಿಗಾಗಿ ರಾಜ್ಯಾದ್ಯಾಂತ ಕಳೆದ ಎರಡು ವರ್ಷಗಳ ಭಾರಿ ಹೋರಾಟ ಮಾಡುತ್ತಿದ್ದಾರೆ. ಆದರೂ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿ ಭಾರೀಯೂ 2ಎ ಮೀಸಲಾತಿ ನೀಡುವುದಾಗಿ ಹೇಳುತ್ತಾರೆ. ಆದರೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಇದು ಲಿಂಗಾಯತ ಸಮುದಾಯಕ್ಕೆ ಮೋಸ ಮಾಡಿದಂತಾಗಿದೆ. ಆದ್ದರಿಂದ ಸ್ವಾಮೀಜಿಯವರು ಕರೆ ಕೊಟ್ಟಿರುವಂತೆ ಸೆ.20ನೇ ಮಂಗಳವಾರ ಬೆಳಿಗ್ಗೆ 9.00 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವ್ ಮನೆ ಮುಂದೆ ಬೃಹತ್ ಧರಣಿ ಸತ್ಯಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಚಿತ್ರದುರ್ಗ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಮೊದಲು ಶಿಗ್ಗಾವಿಯ ವೀರರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿರುವ ರಾಣಿ ಚೆನ್ನಮ್ಮನಿಗೆ ಪೂಜೆ ಸಲ್ಲಿಸಿ ನಂತರ ಧರಣಿ ಮಾಡಲಾಗುವುದು. ಸ್ವಾಮೀಜಿಯವರ ಜೊತೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ರಾಷ್ಟ್ರೀಯ ಅಧ್ಯಕ್ಷರಾದ ವಿಜಯನಂದ ಖಾಷಪ್ಪನವರು, ವಿನಯ್ ಕುಲಕರ್ಣಿ, ಶಿವಶಂಕರ್ ಹಾಗೂ ಹಾಲಿ ಹಾಗೂ ಮಾಜಿ ಶಾಸಕರು ಪಾಲ್ಗೊಳಲಿದ್ದಾರೆ ಎಂದು ವಿವರಿಸಿದರು.ಪತ್ರಿಕಾ ಗೋಷ್ಟಿಯಲ್ಲಿ ಯುವ ಘಟಕದ ಅಧ್ಯಕ್ಷ ಹೆಚ್.ಎಂ.ಮಂಜುನಾಥ, ಎಸ್.ತಿಪ್ಪೇಸ್ವಾಮಿ, ಕಾರ್ತಿಕ್ ಬಿ.ವಿ.ಕೆ.ಎಸ್, ಎಸ್.ಟಿ.ನವೀನ್ ಕುಮಾರ್, ನಾಗರಾಜ್ ನಂದಿಪುರ ಜಿತೇಂದ್ರ ಹುಲಿಕುಂಟೆ, ಪ್ರಶಾಂತರೆಡ್ಡಿ, ವಿಜಯ್‌ಕುಮಾರ್‌ ಗಾರೆಹಟ್ಟಿ, ಹಾಗೂ ಮನು ತಮಟಕಲ್ಲು ಇನ್ನೂ ಇತರ ಸಮಾಜ ಮುಖಂಡರು ಪಾಲ್ಗೊಂಡಿದ್ದರು.