ಸೆ. 20ಕ್ಕೆ ಹಿಂದೂ ಮಹಾಗಣಪತಿ ವಿಸರ್ಜನೆ ಭವ್ಯ ಶೋಭಾಯಾತ್ರೆ

ಕಲಬುರಗಿ.ಸೆ.15: ನಗರದ ಐತಿಹಾಸಿಕ ಬಹುಮನಿ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ 21 ದಿನಗಳ ಮಹಾಗಣಪತಿ ವಿಸರ್ಜನೆ ಸೆಪ್ಟೆಂಬರ್ 20ರಂದು ಜರುಗಲಿದ್ದು, ಆ ನಿಮಿತ್ಯ ಭವ್ಯ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜಾಗರಣೆ ವೇದಿಕೆಯ ಅಧ್ಯಕ್ಷ ನಾಗೇಂದ್ರ ಕಾಬಾಡೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹದಿನೈದು ದಿನಗಳಿಂದ ದಿನನಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ ಎಂದರು.
ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. 19ರಂದು ರಾಷ್ಟ್ರೀಯವಾದಿ ಚಿಂತಕ ಸುಲಿಬೆಲೆ ಚಕ್ರವರ್ತಿಯವರು ವೀರ ಸಾವರ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡುವರು. 20ರಂದು ಮಹಾಗಣಪತಿಯ ಭವ್ಯ ಶೋಭಾ ಯಾತ್ರೆಯು ಪೋಲಿಸ್ ಚೌಕ್, ಜಗತ್ ವೃತ್ತ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಶರಣಬಸವೇಶ್ವರ್ ದೇವಸ್ಥಾನದ ಮೂಲಕ ಅಪ್ಪನ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಗಣೇಶ ಉತ್ಸವದ ನಿಮಿತ್ಯ ದಿನನಿತ್ಯ ಹಲವಾರು ಕಾರ್ಯಕ್ರಮಗಳು ಜರುಗುತ್ತಿವೆ. ಒಂದು ಸಾವಿರ ಮಾತೆಯರಿಂದ ಗಣೇಶನಿಗೆ ಮಹಾ ಮಂಗಳಾರುತಿ, ನಗರದ ಪ್ರತಿಷ್ಠಿತ ಗಣೇಶ ಮಹಾ ಮಂಡಳಿಗಳ ಸದಸ್ಯರಿಗೆ ಸನ್ಮಾನ, ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಡಾ. ಅಂಬೇಡ್ಕರ್, ರಾಷ್ಟ್ರೀಯತೆ ಜಾಗೂ ಕಲ್ಯಾಣ ಕರ್ನಾಟಕ ಉತ್ಸವ ಕುರಿತು ಉಪನ್ಯಾಸ ನೆರವೇರುತ್ತಿವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಮಂತ್ ನವಲದಿ, ಪ್ರಶಾಂತ್ ಗುಡ್ಡಾ, ಶ್ರೀಶೈಲ್ ಮೂಲಗೆ, ಸಿದ್ಧರಾಜ್ ಬಿರಾದಾರ್, ಶಿವರಾಜ್ ಸಂಗೋಳಗಿ ಮುಂತಾದವರು ಉಪಸ್ಥಿತರಿದ್ದರು.