ಸೆ.20ಕ್ಕೆ ಸರೆಗಮಪ ಗಾಯಕ ಮೃತ್ಯಂಜಯ ದೊಡ್ಡವಾಡ ಅವರಿಂದ‌ ಸಂಗೀತ ಸುಧೆ

ಕಲಬುರಗಿ,ಸೆ.19: ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸೆ.20 ರಂದು ಸಾಯಂಕಾಲ 5 ರಿಂದ‌ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸರೆಗಮಪ ಜ್ಯೂರಿ, ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕ ಮೃತ್ಯುಂಜಯ ದೊಡ್ಡವಾಡ ಮತ್ತು ದೂರದರ್ಶನದ ಗಾನ ಚಂದನದ ವಿನ್ನರ್ ಭೂಮಿಕ‌ ಮಧುಸೂದನ್ ಅವರಿಂದ ಸಂಗೀತ ಸುಧೆ ಹರಿಯಲಿದೆ.

ಕಲ್ಯಾಣ ಕರ್ನಾಟಕ ಅಮೃತ‌ ಮಹೋತ್ಸವ ಅಂಗವಾಗಿ ಒಂದು ವಾರಗಳ ಕಾಲ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರದಿಂದ ಅರಂಭವಾಗಿದ್ದು, ಮೃತ್ಯಂಜಯ ದೊಡ್ಡವಾಡ ಮತ್ತು ಭೂಮಿಕಾ‌ ಮಧುಸೂದನ ಅವರು ಮಂಗಳವಾರ ಶರಣರ ವಚನ, ಶಿಶುನಾಳ ಷರೀಫರ ಹಾಗೂ ಖ್ಯಾತ ಕವಿಗಳ ಗೀತೆಗಳನ್ನು ವಿಶೇಷ ಶೈಲಿಯಲ್ಲಿ ಹಾಡುವ ಮೂಲಕ ಕಲಾ ರಸಿಕರಿಗೆ ಸಂಗೀತ ಉಣಬಡಿಸಲಿದ್ದಾರೆ.

ಇದಲ್ಲದೆ ಮಂಗಳವಾರ ಕಲಬುರಗಿಯ ಚಿಂಚನಸೂರ ವರ್ಣಸಿಂಧು ನೃತ್ಯ ಕಲಾಕೇಂದ್ರದ ಪದ್ಮಿನಿ ಅನಂತ ಇವರಿಂದ ಭರತನಾಟ್ಯ, ಗುರುಶಾಂತಯ್ಯ ಸ್ಥಾವರಮಠ ಇವರಿಂದ ಹಿಂದುಸ್ತಾನಿ ಸಂಗೀತ, ಬಸಯ್ಯ ಗುತ್ತೇದಾರ್ ಇವರಿಂದ ಗಝಲ್ ಸಂಗೀತ, ನಿವೇದಿತಾ ರಾಜಾಪೂರ ಇವರಿಂದ ಸಿತಾರ ವಾದನ ಹಾಗೂ ಶಂಕರ ಹೂಗಾರ್ ಇವರಿಂದ ಹಿಂದೂಸ್ತಾನಿ ಗಾಯನ ಸಹ ನಡೆಯಲಿದೆ.