ಸೆ.2ರಂದು ಉಪ ಲೋಕಾಯುಕ್ತ ಫಣೇಂದ್ರ ಬೀದರಗೆ: ನ್ಯಾ.ಕನಕಟ್ಟೆ

ಬೀದರ್:ಆ.24: ಸೆಪ್ಟೆಂಬರ್ 2ರಿಂದ 4ರ ವರೆಗೆ ಉಪ ಲೋಕಾಯುಕ್ತ ಕೆ.ಎನ್.ಫಣೇಂದ್ರ ಬೀದರ್‍ಗೆ ಆಗಮಿಸುತ್ತಿದ್ದು ಮೂರು ದಿನಗಳ ಕಾಲ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ, ಅಧಿಕಾರಿಗಳ ಸಭೆ ಹಾಗೂ ಕೆಲವು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಸ್.ಕೆ ಕನಕಟ್ಟೆ ತಿಳಿಸಿದರು.

ಇಂದು ಜಿಲ್ಲಾ ನ್ಯಾಯಾಲಯದ ಅವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಬೆಳಿಗ್ಗೆ 10 ರಿಂದ 1.30ರ ವರೆಗೆ ಮತ್ತು ಮಧ್ಯಾಹ್ನ 2.30 ರಿಂದ 5 ಗಂಟೆ ವರೆಗೆ ಸಾರ್ವಜನಿಕರ ಅಹವಾಲು ಆಲಿಸಿ ಅಲ್ಲಿಯೇ ಇರುವ ಅಧಿಕಾರಿಗಳಿಂದ ನ್ಯಾಯ ಕೊಡಿಸುವ ಕಾರ್ಯ ಮಾಡಲಿದ್ದಾರೆ. ಜಿಲ್ಲಾ ಲೋಕಾಯುಕ್ತ ಇಲಾಖೆಯಲ್ಲಿ ಬಾಕಿ ಉಳಿದುಕೊಂಡಿರುವ ಸುಮಾರು 43 ಪ್ರಕರಣಗಳನ್ನು ಅಂದೇ ಇತ್ಯರ್ಥಪಡಿಸುವರು. 2 ಹಾಗೂ 4 ರಂದು ರಂಗಂಮಧಿರದಲ್ಲಿ ಮೇಲೆ ತಿಳಿಸಿರುವ ಸಮಯದಂತೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ದೊರಕಿಸಿಕೊಡುವರು. ಸೆಪ್ಟೆಂಬರ್ 3 ರಂದು ಇಡೀ ದಿನಂಪೂರ್ತಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇರುತ್ತದೆ. 4ರಂದು ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ಕರ್ನಾಟಕ ಲೋಕಾಯುಕ್ತ ಕಾಯಿದೆ ಕುರಿತು ಶಿಕ್ಷಣ ಇಲಾಖೆ ರೇಷ್ಮೆ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಸೇರಿದಂತೆ ತಾಲೂಕಿನ ಇತರೆ ಅಧಿಕಾರಿಗಳ ಜೊತೆ ಕಾನೂನು ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಎ.ಆರ್.ಕರ್ನೂಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸಾರ್ವಜನಿಕರು ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ಆಲಿಸಲು ಲೋಕಾಯುಕ್ತ ಇಲಾಖೆ ಸದಾ ಸಿದ್ಧ: ಕರ್ನೂಲ್

ಬೀದರ ಜಿಲ್ಲೆಯ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾರೊಬ್ಬ ಅಧಿಕಾರಿಗಳಿಗೆ ಹಣ ಕೊಡದೆ ಕೆಲಸ ಮಾಡಿಕೊಳ್ಳಬೇಕು. ಅದು ಸಾಧ್ಯವಾಗದಿದ್ದಲ್ಲಿ ಹಣ ಕೇಳುವ ಅಧಿಕಾರಿಗಳ ಬಗ್ಗೆ ನಮಗೆ ದೂರು ಸಲ್ಲಿಸಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಇಲಾಖೆ ಕ್ರಮ ವಹಿಸಲಿದೆ ಎಂದು ಲೋಕಾಯುಕ್ತ ಎಸ್.ಪಿ. ಎ.ಆರ್. ಕರ್ನೂಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗ ಸೆ. 2 ರಿಂದ 4 ರ ವರೆಗೆ ಉಪ ಲೋಕಾಯುಕ್ತರು ಜಿಲ್ಲೆಗೆ ಆಗಮಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ನೀಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಅದೇ ಸಮಯದಲ್ಲಿ ಆನ್‍ಲೈನ್ ಮೂಲಕ ಪ್ರಕರಣ ದಾಖಲಿಸಲಾಗುವುದು. ತಾಲೂಕು ಮಟ್ಟದ ಅಧಿಕಾರಿಗಳು ಸಹ ಸಾರ್ವಜನಿಕರಿಗೆ ಯಾವುದೇ ಹಣ ಆಮೀಷ ಒಡ್ಡದೇ ಕೆಲಸ ಕಾರ್ಯಗಳು ಮಾಡಿಕೊಡಬೇಕು. ಸಾರ್ವಜನಿಕರು ಇದರಿಂದ ಜಾಗೃತಗೊಂಡು ತಮ್ಮ ಕೆಲಸಕ್ಕೆ ಹಣ ಬೇಡಿಕೆಯಿಡುವ ಅಧಿಕಾರಿಗಳ ಹೆಸರು ನಮಗೆ ತಿಳಿಸಿದರೆ ಅದನ್ನು ಗೌಪ್ಯವಾಗಿರಿಸಿ ಅಂತಹವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಿದೆ ಎಂದು ಇದೇ ವೇಳೆ ಕರ್ನೂಲ್ ಸ್ಪಷ್ಟಪಡಿಸಿದರು.