ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಆಚರಿಸಲು ಈಶ್ವರಸಿಂಗ್ ಠಾಕೂರರಿಂದ ಕರೆ

ಬೀದರ,ಸೆ.14: ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಅಂದಿನ ಹೈದ್ರಾಬಾದ ಕರ್ನಾಟಕ ಭಾಗವನ್ನು ನಿಜಾಮ ಆಡಳಿತದಿಂದ ನಮ್ಮ ಅನೇಕ ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ಆದ ದಿನ ಈ ವರ್ಷ ಅಮೃತ ಕಾಲ ನಡೆಯುತ್ತಿದ್ದು,ನಮ್ಮ ಭಾಗದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಿ ಪ್ರತಿ ಮನೆಯ ಮೇಲೆ ರಾಷ್ಟ್ರೀಯ ಧ್ವಜವನ್ನು ಹಾರಿಸಬೇಕೆಂದು ಭಾರತೀಯ ಜನತಾ ಪಾರ್ಟಿಯ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಜಿಲ್ಲೆಯ ಜನತೆಯಲ್ಲಿ ಕೋರಿದ್ದಾರೆ.
ನಿಜಾಮ ಆಡಳಿತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತ ದೇಶಕ್ಕೆ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆಯಿತು. ಕಲ್ಯಾಣ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ.
1947 ಆಗಸ್ಟ್ 15ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಮೋಂಡುತನದ ಹೈದರಾಬಾದ್ ಪ್ರಾಂತ್ಯದ ರಾಜ ನಿಜಾಮ, ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದರು. ಇದರಿಂದಾಗಿ ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು. ಭಾರತ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ್ಯದ ಚಳುವಳಿ ನಡೆಯಿತು. ಅಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು.
ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಪ್ರಮುಖ ಘಟ್ಟವಾಗಿರೋದು 1948 ಮೇ 9ರಂದು ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಸೇನಾನಿಗಳ ಹತ್ಯಾಕಾಂಡ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಾವುರಾವ ಪಾಟೀಲ ಹಾಗೂ ವಿಠೋಬಾ ನಿರೋಡೆ, ಗೋರ್ಟಾ ಗ್ರಾಮದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿದ್ದರು. ಈ ವೇಳೆ ರಜಾಕಾರರ ಸಹವರ್ತಿ ಆ ಧ್ವಜ ಇಳಿಸಿದ್ದಲ್ಲದೇ ಬಾವುರಾವ ಪಾಟೀಲರಿಗೆ ಅವಮಾನ ಮಾಡಿದ್ದರು. ಅಲ್ಲದೆ ಪಾಟೀಲರ ಮನೆ ಲೂಟಿ ಮಾಡಿದರು. ಅವಮಾನ, ಮನೆ ಲೂಟಿಯಿಂದ ಆಕ್ರೋಶಗೊಂಡ ಬಾವುರಾವ ಪಾಟೀಲ, ರಜಾಕಾರರ ಸಹವರ್ತಿ ಇಸಾಮುದ್ದೀನನ್ನು ಕೊಂದು ಹಾಕಿದ್ದರು. ಇಸಾಮುದ್ದೀನ್ ಕೊಲೆ ರಜಾಕಾರರನ್ನು ಕೆರಳಿಸಿತು.
ಗೋರ್ಟಾ ಗ್ರಾಮದ ಮಹಾದೇವಪ್ಪ ಡುಮಣಿ ಎಂಬ ಸಾಹುಕಾರರ ಮನೆ ಅಬೇಧ್ಯ ಕೋಟೆಯಾಗಿತ್ತು. ಹೀಗಾಗಿ, ಅಲ್ಲಿ ನೂರಾರು ಜನ ಸ್ವಾತಂತ್ರ್ಯ ಸೇನಾನಿಗಳು ಆಶ್ರಯ ಪಡೆಯುತ್ತಿದ್ದರು. ರಜಾಕರು ದಾಳಿ ವೇಳೆ ಅಲ್ಲಿ 800ಕ್ಕೂ ಹೆಚ್ಚು ಜನರು ಸೇನಾನಿಗಳು ಇದ್ದರು ಎನ್ನಲಾಗಿದೆ. ಇಸಾಮುದ್ದೀನ್‍ನ ಕೊಲೆ ಸೇಡನ್ನು ತೀರಿಸಿಕೊಳ್ಳಲು ಆತನ ಅಣ್ಣ ಚಾಂದ ಪಟೇಲ್ ರಜಾಕಾರರ ಪಡೆಯ ನೇತೃತ್ವ ವಹಿಸಿ ಗೋರ್ಟಾ ಗ್ರಾಮ ಗುರಿಯಾಗಿಸಿಕೊಂಡು ದಾಳಿ ಮಾಡಿ ಎಲ್ಲರನ್ನು ಹತ್ಯೆಗೈದ ಎಂಬ ಕರಾಳ ಇತಿಹಾಸವಿದೆ.
ಅನೇಕರ ತ್ಯಾಗ ಮತ್ತು ಬಲಿದಾನದಿಂದ ಪಡೆದ ಸ್ವಾತಂತ್ರ್ಯದ ದಿನಾಚರಣೆಯನ್ನು ಆಚರಿಸಿ ಹುತಾತ್ಮರಿಗೆ ಗೌರವವನ್ನು ಸಲ್ಲಿಸಬೇಕೆಂದು ಈಶ್ವರಸಿಂಗ್ ಠಾಕೂರ ಅವರು ಕೋರಿದರು.
ಅಂದು ಸಂಜೆ ಗೋರ್ಟಾ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈಶ್ವರಸಿಂಗ್ ಠಾಕೂರ ಅವರು ಪತ್ರಿಕಾ ಪಕ್ರಟಣೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.