ಸೆ.17ಕ್ಕೆ ತಿಕೋಟಾ ತಾಲೂಕಿನ ಅರಕೇರಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಭೇಟಿ ಕಾರ್ಯಕ್ರಮ: ಪೂರ್ವಭಾವಿ ಸಭೆ

ವಿಜಯಪುರ ಸೆ.16-ತಿಕೋಟಾ ತಾಲೂಕಿನ ಅರಕೇರಿ ಗ್ರಾಮದಲ್ಲಿ ಸೆಪ್ಟೆಂಬರ್ 17ರಂದು ನಡೆಯಲಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 15ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ತಿಕೋಟ ತಹಸೀಲ್ದಾರ ಅವರು ಗ್ರಾಮಕ್ಕೆ ಭೇಟಿ ನೀಡಿ ಸ್ವೀಕರಿಸಿದ ಅರ್ಜಿಗಳು, ಗ್ರಾಮದಲ್ಲಿನ ಕುಡಿಯುವ ನೀರಿನ ವ್ಯವಸ್ಥೆ, ಸ್ಮಶಾನ ಲಭ್ಯತೆ, ಶಾಲೆ-ಅಂಗನವಾಡಿ, ವಸತಿ ನಿಲಯಗಳ ಸ್ಥಿತಿಗತಿ, ಬಿಪಿಎಲ್ ಕಾರ್ಡುಗಳು, ಆರೋಗ್ಯ ಕರ್ನಾಟಕ ಕಾರ್ಡುಗಳ ವಿತರಣೆ, ವಾಸದ ಮನೆಗಳ ಪರಿಶೀಲನೆ, ರಸ್ತೆ ವಿವಾದ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಮಗ್ರ ಚರ್ಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ದೂರದ ಜಿಲ್ಲಾ ಕೇಂದ್ರದ ಅಧಿಕಾರಿಗಳು ನಮ್ಮ ಹಳ್ಳಿಗಳಿಗೂ ಬರುತ್ತಾರೆ, ನಮ್ಮ ಅಹವಾಲುಗಳನ್ನು ಆಲಿಸುತ್ತಾರೆ, ನಮಗೆ ಸ್ಪಂದಿಸುತ್ತಾರೆ ಅನ್ನುವ ವಿಶ್ವಾಸ ಮತ್ತು ಭರವಸೆಯು ಗ್ರಾಮೀಣ ಜನರಿಗೆ ಬರುವ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯ ಹಾಜರಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ತಿಳಿಸಿದಾಗ್ಯೂ ಸಕಾರಣವಿಲ್ಲದೇ ಯಾವುದಾದರು ಇಲಾಖೆಯ ಅಧಿಕಾರಿಗಳು ಗೈರು ಹಾಜರಾದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಅಂದು ಅಚ್ಚುಕಟ್ಟಾಗಿ ನಡೆಯಬೇಕು. ಗ್ರಾಮಸ್ಥರು ಆ ವೇಳೆ ಸಲ್ಲಿಸುವ ನಾನಾ ಮನವಿಗಳಿಗೆ ಸ್ಥಳದಲ್ಲಿಯೇ ಸಾಧ್ಯವಾದ ಮಟ್ಟಿಗೆ ಪರಿಹಾರ ಕಲ್ಪಿಸುವಂತಾಗಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕೂಡಲು ಅಚ್ಚುಕಟ್ಟಾದ ಆಸನಗಳ ವ್ಯವಸ್ಥೆ, ಅರ್ಜಿಗಳ ಬಗ್ಗೆ ನೋಂದಾಯಿಸಲು ಸಿಬ್ಬಂದಿಯ ನಿಯೋಜನೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಫಲಾನುಭವಿಗಳಿಗೆ ಸವಲತ್ತು ವಿತರಣೆಗೆ ವ್ಯವಸ್ಥೆ ಮಾಡಬೇಕು. ಯುಡಿಐಡಿ ಕಾರ್ಡು ವಿತರಣೆ, ಆಧಾರ್ ಕಾರ್ಡು ತಿದ್ದುಪಡಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಅರ್ಜಿಗಳ ಸ್ವೀಕೃತಿ ಮತ್ತು ವಿತರಣೆಗೆ ಸಹ ಗಣಕಯಂತ್ರಗಳನ್ನು ಅಳವಡಿಸಿ ವ್ಯವಸ್ಥೆ ಮಾಡಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಗ್ರಾಮ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಕುರಿತು ಒಟ್ಟು 24 ಅರ್ಜಿಗಳು ಸ್ವೀಕೃತಿಯಾಗಿವೆ. ಈ ಪೈಕಿ 21 ಅರ್ಜಿಗಳು ಮಂಜೂರಾತಿಗೆ ಅರ್ಹವಾಗಿವೆ ಎಂದು ತಿಕೋಟಾ ಗ್ರೇಡ್ 2 ತಹಸೀಲ್ದಾರ ಸೋಮಲಿಂಗ್ ಅರಕೇರಿ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ವೇದಿಕೆಗೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಡಂಗೂರ ಸಾರಿ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿ ಕಾರ್ಯಕ್ರಮದ ಬಗ್ಗೆ ಗ್ರಾಮಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ, ವಿಜಯಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾ ಎಲ್., ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್.ಫುಲೇಕರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಸಿದ್ಧರಾಮ ಮಾರಿಹಾಳ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಎಸ್.ಎಂ.ಬರಗಿಮಠ, ಬಿಸಿಎಂ ಇಲಾಖೆಯ ಉಪ ನಿರ್ದೇಶಕರಾದ ಈರಣ್ಣ ಆಶಾಪುರ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.