ಸೆ.16 ರಂದು 1000 ಎಂ.ಟಿ. ಸಾಮರ್ಥ್ಯದ ಉಗ್ರಾಣ ಉದ್ಘಾಟನೆ

ಚಿತ್ರದುರ್ಗ, ಸೆ.13: ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘವು ಎಪಿಎಂಸಿ ಆವರಣದ ಸಿ ಬ್ಲಾಕ್ ನಲ್ಲಿ ದಿ.ಶರಣ ಎಂ.ಗಂಗಾಧರಯ್ಯ ಇವರ ಜ್ಞಾಪಕಾರ್ಥವಾಗಿ ನೂತನವಾಗಿ ನಿರ್ಮಿಸಿರುವ 1000 ಎಂ.ಟಿ.ಸಾಮರ್ಥ್ಯದ ಉಗ್ರಾಣದ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ಸೆ. 16 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್‌.ಎಂ.ಮಂಜುನಾಪ್ಪ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಘವು ರೈತರ ಹಿತಾಸಕ್ತಿಯನ್ನು ಮೂಲ ಗುರಿಯನ್ನಾಗಿಸಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘವು, 1956 ರಲ್ಲಿ ಪ್ರಾರಂಭಗೊಂಡು 73  ವರ್ಷಗಳಿಂದ ರೈತರ ಹೆಳ್ಗೆಗಾಗಿ ಶ್ರಮಿಸುತ್ತಾ ಬಂದು, ಇಂದು 80 ಲಕ್ಷ ರೂ.ಗಳ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದ ಅವರು, ಸಾರ್ವಜನಿಕ ಪಡಿತರ ಆಹಾರ ದಿನಸಿಯ ಸಗಟು ಮತ್ತು ಚಿಲ್ಲರೆ ವಿತರಣೆ ಕಾರ್ಯವನ್ನು ಸುಮಾರು 45ವರ್ಷಗಳಿಂದ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದ್ದು, ರೈತರಿಗೆ ಬೇಕಾದ ರಸ ಗೊಬ್ಬರಗಳನ್ನು ಮತ್ತು ಕೃಷಿ ಪರಿಕರಗಳಾದ ಪಿವಿಸಿ ಮತ್ತು ಜಿಎ ಪೈಪ್‌ಗಳು, ಹನಿ ನೀರಾವರಿ ಪೈಪ್ ಮತ್ತು ಇನ್ನಿತರೆ ಬಿಡಿಭಾಗಗಳು ಹಾಗೂ ಭಾರತೀಯ ಪ್ರಧಾನ ಮಂತ್ರಿ ಕೇಂದ್ರದ ಜನೌಷಧಿಗಳನ್ನು ಖಾಸಗಿ ವರ್ತಕರಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರುರೈತರು ಬೆಳೆದ ಬೆಳೆಯನ್ನು ಸಂರಕ್ಷಿಸುವುದಕ್ಕೊಸ್ಕರ 1000 ಎಂ.ಟಿ.ಸಾಮರ್ಥ್ಯದ ಉಗ್ರಾಣವನ್ನು ನಿರ್ಮಾಣ ಮಾಡಲಾಗಿದ್ದು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉಗ್ರಾಣದ ಉದ್ಘಾಟನೆಯನ್ನು ಮಾಡಲಿದ್ದು, ಸಾಣೇಹಳ್ಳಿಯ ಡಾ.ಪಂಡಿತರಾಧ್ಯ ಶಿವಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೇರಿದಂತೆ ದಾವಣಗೆರೆ ಸಂಸದರು ಜಿಲ್ಲೆಯ ಶಾಸಕರುಗಳು, ಸ್ಥಳೀಯ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರುಗಳು, ನಿರ್ದೇಶಕರುಗಳು ಹಾಗೂ ರಾಜ್ಯ ಮಟ್ಟದ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ನಿಶಾನಿ ಎಂ.ಜಯ್ಯಣ್ಣ, ಕುಬೇರಪ್ಪ, ಹೆಚ್.ಎನ್.ಹನುಮಂತಪ್ಪ, ಎ.ಈಶ್ವರಪ್ಪ, ಧನಂಜಯ, ಬಿ.ಲೋಲಾಕ್ಷಮ್ಮ, ಎನ್.ಕಲ್ಲೇಶ್, ಆನಂದಪ್ಪ, ವೈ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.