ಸೆ. 15 ರಿಂದ ಪುರಸಭೆ ಆವರಣದಲ್ಲಿ ಉಪವಾಸ ಸತ್ಯಾಗ್ರಹ

ಬ್ಯಾಡಗಿ,ಸೆ4: ಆಶ್ರಯ ಯೋಜನೆಯಡಿ ಫಲಾನುಭವಿಗಳಿಂದ “ಜಿಪ್ಲಸ್1” ಮನೆಗಳ ನಿರ್ಮಾಣಕ್ಕೆ ವಂತಿಗೆಯನ್ನು ತುಂಬಿಸಿಕೊಂಡು ಈವರೆಗೂ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೇ ಕಾಲಹರಣ ಮಾಡುತ್ತಿರುವ ಪುರಸಭೆಯ ಕ್ರಮವನ್ನು ಖಂಡಿಸಿರುವ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಅವರು ಸೆ.10ರೊಳಗಾಗಿ ಆಶ್ರಯ ಯೋಜನೆಯ ಮನೆಗಳನ್ನು ಸಕಾಲಕ್ಕೆ ಹಂಚಿಕೆ ಮಾಡುವ ತೀರ್ಮಾನ ಕೈಗೊಳ್ಳದಿದ್ದಲ್ಲಿ ಸೆ.15ರಿಂದ ಪುರಸಭೆಯ ಆವರಣದಲ್ಲಿ ಅನಿರ್ದಿಷ್ಟಾವಧಿ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಪಟ್ಟಣದ ವ್ಯಾಪ್ತಿಯಲ್ಲಿರುವ ಬಡಜನರಿಗೆ ನಿವೇಶನ ನೀಡುವುದಾಗಿ ಹಲವಾರು ವರ್ಷಗಳಿಂದ ನಿವೇಶನ ರಹಿತರಿಂದ ಪುರಸಭೆಯು ಅರ್ಜಿ ಪಡೆಯುತ್ತಾ ಬಂದಿದ್ದು, ಕಳೆದ 2014ರಲ್ಲಿ ಪುರಸಭೆಯ ವತಿಯಿಂದ ಮಲ್ಲೂರ ರಸ್ತೆಯಲ್ಲಿ ಆಶ್ರಯ ಯೋಜನೆಗಾಗಿ ಸುಮಾರು ಎರಡು ಕೋಟಿ ರೂಗಳ ವೆಚ್ಚದಲ್ಲಿ 10.14 ಎಕರೆ ಜಮೀನನ್ನು ಖರೀದಿಸಿತ್ತು. ತದನಂತರ ಜಿಪ್ಲಸ್1 ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವುದಾಗಿ ಆಯ್ದ ಫಲಾನುಭವಿಗಳಿಂದ ತಲಾ 30ಸಾವಿರ ರೂಗಳನ್ನು ವಂತಿಗೆ ಹಣವೆಂದು ಪಾವತಿಸಿಕೊಂಡು ಈವರೆಗೂ ಮನೆಗಳನ್ನು ಹಂಚಲಾಗಿರುವುದಿಲ್ಲ. ನಿವೇಶನ ರಹಿತರಿಂದ ಪಡೆದ 30ಸಾವಿರ ರೂಗಳು ಏನಾಗಿವೆ..? ಯಾವ ಖಾತೆ ಸೇರಿವೆ…? ಎಂಬುದರ ಬಗ್ಗೆ ಮಾಹಿತಿಯನ್ನು ಕೇಳಿದ್ರೆ ಪುರಸಭೆಯವರು ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೇಶನದ ಬಗ್ಗೆ ಈ ಹಿಂದೆ ಬೆಟ್ಟದ ಮಲ್ಲೇಶ್ವರ ಗುಡ್ಡದ ಮೇಲೆ ಗುಡಿಸಲುಗಳನ್ನು ಹಾಕಿಕೊಂಡ ನಿವೇಶನ ರಹಿತರು ಪ್ರತಿಭಟನೆ ಮಾಡುತ್ತಿದ್ದಾಗ ಪ್ರತಿಭಟನೆಯನ್ನು ನಿಲ್ಲಿಸುವಂತೆ ಅಧಿಕಾರಿಗಳು ಅವರ ಮನವೊಲಿಸಿ. ಒಂದು ವಾರದಲ್ಲಿ ಎಲ್ಲರಿಗೂ ನಿವೇಶನಗಳನ್ನು ನೀಡುವ ಭರವಸೆ ನೀಡಿದ್ದರು. ಆಗ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ಇದಾದ ಬಳಿಕ ಹಲವಾರು ಬಾರಿ ಶಾಸಕರಿಗೆ, ಮುಖ್ಯಾಧಿಕಾರಿಗಳಿಗೆ, ಸಚಿವರಿಗೆ ರಾಜೀವಗಾಂಧಿ ವಸತಿ ನಿಗಮ, ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅಸಮಾಧಾನವನ್ನು ವ್ಯಕ್ತ ಪಡಿಸಿದರು

ಪುರಸಭೆಯ ಆವರಣದಲ್ಲಿಯೇ ವಾಸ:
ಈ ಬಗ್ಗೆ ಧೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಸೆ.10ರೊಳಗಾಗಿ ಮನೆಗಳನ್ನು ಹಂಚಿಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳದೇ ಇದ್ದಲ್ಲಿ ಸೆ.15ರಿಂದ ಪುರಸಭೆಯ ಎದುರು ಅನಿರ್ಧಿಷ್ಟ ಅವಧಿಯವರೆಗೆ ಹೋರಾಟ ಮಾಡಲಾಗುವುದು. ಒಂದು ವೇಳೆ ಹುಸಿ ಭರವಸೆ ನೀಡಲು ಮುಂದಾದರೆ ಪುರಸಭೆಯ ಕಾರ್ಯಾಲಯದ ಎರಡೂ ಗೇಟುಗಳಿಗೆ ಬೀಗ ಜಡಿದು, ಆವರಣದಲ್ಲಿಯೇ ಒಲೆಗಳನ್ನು ನಿರ್ಮಿಸಿಕೊಂಡು ಅಲ್ಲಿಯೇ ಜೀವನ ಮಾಡುವ ಮೂಲಕ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಅಧ್ಯಕ್ಷೆ ಫರೀದಾಬಾನು ನದ್ದಿಮುಲ್ಲಾ, ಪೀರಾಂಬಿ ದೇಸೂರ, ಗುತ್ತೆವ್ವ ಮಾಳಗಿ, ನೀಲಮ್ಮ ಬಂಡಿವಡ್ಡರ. ನಿಂಗಪ್ಪ ಆಡಿನವರ ಉಪಸ್ಥಿತರಿದ್ದರು.