
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೮; ಭಾರತ ದೇಶದ ಪ್ರಜೆಯಾಗಿ ಹೆಮ್ಮೆಪಡಲು ಸರ್ಕಾರ ನಮಗೊಂದು ಸುವರ್ಣಾವಕಾಶ ಕಲ್ಪಿಸಿದ್ದು, ಸೆ. 15 ರಂದು ಭಾರತ ಸಂವಿಧಾನದ ಪೀಠಿಕೆ ಓದಲು ಹೆಚ್ಚು ಹೆಚ್ಚು ಜನರು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು, ನೋಂದಣಿಗೆ ಸೆ. 12 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಮನವಿ ಮಾಡಿದ್ದಾರೆ. ಇದೇ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುವ ನಿಟ್ಟಿನಲ್ಲಿ, ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ಕೆ ನೊಂದಣಿ ಮಾಡಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತ ಜಾತ್ಯತೀಯ ರಾಷ್ಟ್ರ. ಭಾರತ ದೇಶದ ಬಗ್ಗೆ ನಮಗಿರುವ ಹೆಮ್ಮೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಅಂಶವನ್ನು ಎಲ್ಲರೂ ಶಾಲೆಗಳಲ್ಲಿ ಓದಿರುತ್ತಾರೆ, ಬಳಿಕ ಅದನ್ನು ಮರೆತುಬಿಡುತ್ತಾರೆ. ಭಾರತ ಸಂವಿಧಾನದ ಪೀಠಿಕೆಯನ್ನು ಸೆ. 15 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಯೊಬ್ಬರೂ ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಅಂದು ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆಯನ್ನು ಓದಿ, ದೇಶದ ಬಗ್ಗೆ ತಮಗೆಷ್ಟು ಅಭಿಮಾನವಿದೆ ಎಂಬುದನ್ನು ಈ ಮೂಲಕವೂ ತೋರಿಸಲು ಒಂದು ಸುವರ್ಣಾವಕಾಶ ನಮಗೆ ಒದಗಿಬಂದಿದೆ. ಈ ಅವಕಾಶವನ್ನು ಈ ನಾಡಿನ ಎಲ್ಲರೂ ಉಪಯೋಗಿಸಿಕೊಂಡು, ಇದಕ್ಕಾಗಿ ಆನ್‍ಲೈನ್‍ನಲ್ಲಿ ನೊಂದಣಿ ಮಾಡಿಕೊಳ್ಳಬೇಕು, ಅಲ್ಲದೆ ಸೆ. 15 ರಂದು ಬೆ. 10 ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದಿ, ಅದನ್ನು ಪ್ರತಿಜ್ಞಾ ವಿಧಿಯಂತೆ ಸ್ವೀಕರಿಸಬೇಕು. ಅದರ ಫೋಟೋವನ್ನು ಆನ್‍ಲೈನ್ ನಲ್ಲಿ ಅಪ್‍ಲೋಡ್ ಮಾಡಿಕೊಂಡಲ್ಲಿ, ಅಂತಹ ಎಲ್ಲರಿಗೂ ಸೆ. 15 ರ ಬಳಿಕ ಆನ್‍ಲೈನ್‍ನಲ್ಲಿ ಅದೇ ವೆಬ್‍ಸೈಟ್ ಮೂಲಕವೇ ಪ್ರಮಾಣಪತ್ರ ದೊರೆಯಲಿದೆ. ಕಾರ್ಯಕ್ರಮದ ಯಶಸ್ವಿಗೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು ವಿಶೇಷ ಆಸಕ್ತಿ ಹೊಂದಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ. ಆನಂದ್, ಆಹಾರ ಇಲಾಖೆ ಜಂಟಿನಿರ್ದೇಶಕ ಮಧುಸೂಧನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.