ಸೆ. 13 ರಿಂದ ವಿಧಾನಸಭಾಧಿವೇಶನ


ಬೆಂಗಳೂರು, ಆ. ೧೯- ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ೨೪ ರವರೆಗೆನಡೆಯಲಿದೆ. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ನೇತೃತ್ವದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೆ. ೧೩ ರಿಂದ ೨೪ ರವರೆಗೆ ೧೦ ದಿನಗಳ ಕಾಲ ವಿಧಾನಮಂಡಲದ ಅಧಿವೇಶನವನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸಂಪುಟದ ನಿರ್ಧಾರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ವಿಧಾನಮಂಡಲದ ಅಧಿವೇಶನವನ್ನು ಸೆ. ೧೩ ರಿಂದ ೨೪ ರವರೆಗೆ ನಡೆಸಲು ಸಂಪುಟ ನಿರ್ಧರಿಸಿದೆ ಎಂದರು.
ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಶುಚಿ ಕಾರ್ಯಕ್ರಮದಡಿ ವಿತರಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಆರೋಗ್ಯ ಇಲಾಖೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಇದಕ್ಕಾಗಿ ೪೭ ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ಹೇಳಿದರು. ಅನುದಾನಿತ ಮತ್ತು ಸರ್ಕಾರಿ ಶಾಲೆಗಳ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ೧೦ ಸ್ಯಾನಿಟರ್ ನ್ಯಾಪ್‌ಕಿನ್‌ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಅಮೃತ ಯೋಜನೆಗಳಿಗೆ ಹಣ ಬಿಡುಗಡೆ
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಸ್ವಾತಂತ್ರ್ಯದ ೭೫ನೇ ವರ್ಷಾಚರಣೆಯ ಅಂಗವಾಗಿ ಸ್ವಾತಂತ್ರ್ಯ ದಿನಾಚರಣೆ ಎಂದು ಪ್ರಕಟಿಸಿದ್ದ ಅಮೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ಯೋಜನೆಗಳನ್ನು ಜಾರಿಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.
ಅಮೃತ ಉತ್ಪಾದಕ ಯೋಜನೆಯಡಿ ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು ೭೫೦ ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿ, ಪ್ರತಿ ಸಂಸ್ಥೆಗೆ ೩೦ ಲಕ್ಷ ರೂ.ಗಳಂತೆ ೩ ವರ್ಷದ ಅವಧಿಗೆ ೨೨೫ ಕೋಟಿ ರೂ.ಗಳ ಅನುದಾನ ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಅಮೃತ ನಿರ್ಮಲನಗರ ಯೋಜನೆಯಡಿ ರಾಜ್ಯದ ಆಯ್ದ ೭೫ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛತೆ ಮತ್ತು ಸೌಂದರ್ಯಕ್ಕಾಗಿ ಪ್ರತಿ ಸ್ಥಳೀಯ ಸಂಸ್ಥೆಗೆ ೧ ಕೋಟಿ ರೂ.ಗಳಂತೆ ೭೫ ಕೋಟಿ ರೂ.ಗಳ ನೆರವು ನೀಡುವ ಆರ್ಥಿಕ ಯೋಜನೆಗೂ ಸಂಪುಟ ಅಸ್ತು ಎಂದಿದೆ ಎಂದರು.
ಅಮೃತ ಗ್ರಾಮ ಪಂಚಾಯ್ತಿ ಯೋಜನೆಯಡಿ ಆಯ್ದ ೨೫೦ ಗ್ರಾಮ ಪಂಚಾಯ್ತಿಗಳಲ್ಲಿ ಬೀದಿ ದೀಪ, ಮನೆ ಮನೆಗಳಿಗೆ ಕುಡಿಯುವ ನೀರು ಸರಬರಾಜು, ಘನತ್ಯಾಜ್ಯ ವಿಂಗಡಣೆ, ವಿಲೇವಾರಿ, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಪ್ರತಿ ಗ್ರಾ.ಪಂ.ಗಳಿಗೆ ೨೫ ಲಕ್ಷ ರೂ.ಗಳನ್ನು ನೀಡಲಾಗುವುದು ಎಂದರು.
ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಆಯ್ದ ೭೫೦ ಶಾಲೆಗಳಿಗೆ ಸುಸರ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ಪ್ರತಿ ಶಾಲೆಗೆ ೧೦ ಲಕ್ಷ ರೂ.ಗಳಂತೆ ೭೫ ಕೋಟಿ ರೂ.ಗಳ ಅನುದಾನ ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಅಮೃತ ಆರೋಗ್ಯ ಮೂಲ ಸೌಕರ್ಯ ಉನ್ನತೀಕರಣ ಯೋಜನೆಯಡಿ ರಾಜ್ಯದ ೭೫೦ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕಾಗಿ ತಲಾ ೨೦ ಲಕ್ಷ ರೂ.ಗಳಂತೆ ೧೫೦ ಕೋಟಿ ರೂ.ಗಳ ವೆಚ್ಚಕ್ಕೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಆರೋಗ್ಯ ಉಪಕೇಂದ್ರಗಳ ಉನ್ನತೀಕರಣ
ರಾಜ್ಯದ ೨೮೫೯ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೇಗೇರಿಸಲು ೪೭೮ ಕೋಟಿ ರೂ.ಗಳನ್ನು ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ. ೪೭೮ ಕೋಟಿ ರೂ.ಗಳ ಪೈಕಿ ಕೇಂದ್ರ ಸರ್ಕಾರ ಶೇ. ೬೦ ರಷ್ಟು ಅನುದಾನ ಭರಿಸಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಉಪಕೇಂದ್ರಗಳ ಮೇಲ್ದರ್ಜೆ ಕಾರ್ಯ ಅನುಷ್ಠಾನವಾಗಲಿದೆ ಎಂದರು.
ರಾಜ್ಯದಲ್ಲಿ ಮಾನಸಿಕ ಆರೋಗ್ಯ ಪ್ರಾಧಿಕಾರ ಸ್ಥಾಪಿಸಲು ಅವಕಾಶ ನೀಡುವ ಮಾನಸಿಕ ಆರೋಗ್ಯ ನಿಯಮಗಳಿಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಚನೆಯಾಗಿದ್ದ ಸಚಿವ ಸಂಪುಟದ ಉಪಸಮಿತಿಗಳು ವಿಸರ್ಜನೆಯಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ೧೪ ಸಚಿವ ಸಂಪುಟ ಉಪಸಮಿತಿಗಳನ್ನು ರಚಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಸಂಪುಟ ತೀರ್ಮಾನ ಕೈಗೊಂಡಿತು ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಹೆಸರು ಬದಲಾವಣೆ, ಚರ್ಚೆ ಇಲ್ಲ
ರಾಜ್ಯದ ಇಂದಿರಾ ಕ್ಯಾಂಟಿನ್‌ಗಳ ಹೆಸರನ್ನು ಬದಲಾಯಿವವ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಗಳು ಆಗಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿರುವುದರಿಂದ ೩ನೇ ಅಲೆಯ ಬಗ್ಗೆಯೂ ಯಾವುದೇ ಚರ್ಚೆಗಳು ನಡೆಯಲಿಲ್ಲ ಎಂದು ಅವರು ಹೇಳಿದರು.