ಸೆ 11ರಿಂದ ಇಂದ್ರಧನುಷ್ 5.0 ಲಸಿಕಾ ಅಭಿಯಾನ, ಮುಂಜಾಗ್ರತೆಯಾಗಿ ಜಾಗೃತಿ ಜಾಥ.


ಸಂಜೆವಾಣಿ ವಾರ್ತೆ
 ಕೂಡ್ಲಿಗಿ. ಸೆ.9 : – ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಇಂದ್ರಧನುಷ್ 5.0 ಲಸಿಕಾ ಅಭಿಯಾನದ ಅಂಗವಾಗಿ ಇಂದು ಬೆಳಿಗ್ಗೆ ಗೋವಿಂದಗಿರಿ ಗೊಲ್ಲರಹಟ್ಟಿ ಹಾಗೂ ತಾಂಡಾದ ಪ್ರಮುಖ ರಸ್ತೆಗಳಲ್ಲಿ ಮತ್ತು ಕೂಡ್ಲಿಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಭಾಗಿತ್ವದಲ್ಲಿ ಈ ಅಭಿಯಾನ ಜಾಥಾವನ್ನು ಏರ್ಪಡಿಸಲಾಗಿತ್ತು.
ಈ ಅಭಿಯಾನ ಜಾಥಾದ ನೇತೃತ್ವವಹಿಸಿದ್ದ  ಆರೋಗ್ಯ ಸುರಕ್ಷಾ ಅಧಿಕಾರಿ ಗಿರಿಜಾ ಅಂಜಿನಪ್ಪ ಮಾತನಾಡಿ 5 ವರ್ಷದೊಳಗಿನ ಮಕ್ಕಳಿಗೆ ರುಬೆಲ್ಲಾ, ದಡಾರದಂತಹ ಮಾರಕ ರೋಗಗಳಿಗೆ  ಮಕ್ಕಳು ಬಲಿಯಾಗುವುದನ್ನು ತಡೆಯಲು ಈ ಲಸಿಕೆಗಳನ್ನು ನೀಡಲಾಗುತ್ತದೆ. ಈ ಹಿಂದೆ ಯಾವುದಾದರೂ ಲಸಿಕೆಗಳು ತಪ್ಪಿದ್ದರೆ, ಇದೇ  ತಿಂಗಳ 11ರಿಂದ 17 ದಿನಾಂಕದವರೆಗೆ  ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರ, ಅಂಗನವಾಡಿ ಅಥವಾ ಆರೋಗ್ಯ ಸಹಾಯಕರ ಮೂಲಕ ಇಂದ್ರಧನುಷ್ 5.0 ಅಭಿಯಾನದಲ್ಲಿ ಲಸಿಕೆಗಳನ್ನು ಹಾಕಿಸಿ, ಮಕ್ಕಳನ್ನು ರೋಗ ಮುಕ್ತಗೊಳಿಸಬಹುದು ಎಂದು ಜಾಗೃತರಾಗುವಂತೆ  ಜಾಥಾದ ಮೂಲಕ ಪಾಲಕ ಪೋಷಕರಲ್ಲಿ ಗಿರಿಜಾ ಅಂಜಿನಪ್ಪ ಮನವಿ ಮಾಡಿದರು.
ಗೋವಿಂದಗಿರಿ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಎಂ ಎಸ್ ಸುಲೋಚನಾ ಮಾತನಾಡಿ ಮಾರಕ ರೋಗಗಳಿಂದ ಮಕ್ಕಳನ್ನು ಕಾಪಾಡಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಇಂದ್ರಧನುಷ್ 5.0 ಮಹತ್ವದ ಯೋಜನೆಯಾಗಿದೆ ವಾರದ ಅಭಿಯಾನ ಸೆಪ್ಟೆಂಬರ್ 11ರಿಂದ ಪ್ರಾರಂಭವಾಗಲಿದ್ದು ಇಂದು ಮುಂಜಾಗ್ರತೆಯಾಗಿ 5ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ ರೋಗಮುಕ್ತ ಮಗುವನ್ನಾಗಿ ಕಾಪಾಡಬಹುದಾಗಿದೆ ಎಂದು ಸುಲೋಚನಾ ತಿಳಿಸಿದರು ಅಲ್ಲದೆ ತಮ್ಮ ಮನೆಯ 5 ವರ್ಷದೊಳಗಿನ ಮಕ್ಕಳಿದ್ದಲ್ಲಿ ಕರೆತಂದು ಲಸಿಕೆ ಹಾಕಿಸಿ ಆರೋಗ್ಯವಂತ ಮಗುವಾಗಿರಿಸಲು ತಾವು ಸಹ ಅಭಿಯಾನದಲ್ಲಿ ಕೈ ಜೋಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಮುಂದಾಗಿ ಎಂದು ತಮ್ಮ ಶಾಲೆಯ ಮಕ್ಕಳಿಗೆ ಕಿವಿ ಮಾತು ಹೇಳಿದರು.
 ಶಾಲೆಯ ಶಿಕ್ಷಕಿಯರಾದ ಎಂ ಹೇಮಲತಾ, ವಿ. ರಶ್ಮಿ, ಎಂ ಸಿ ಲಕ್ಷ್ಮೀದೇವಿ ಜಾಥದಲ್ಲಿ ಭಾಗವಹಿಸಿದ್ದರು ಇದಕ್ಕೂ  ಮೊದಲು ಕೂಡ್ಲಿಗಿ ಪಟ್ಟಣದ  ಜಾಗೃತಿ ಜಾಥಾದಲ್ಲಿ ಪಟ್ಟಣದ ಮೇನ್ ಬಾಯ್ಸ್ ಶಾಲೆಯ  ಮುಖ್ಯ ಶಿಕ್ಷಕರಾದ ರುದ್ರಮ್ಮ ಟಿ, ಶಿಕ್ಷಕರಾದ ಶೋಭಾ ಕೆ, ರತ್ನಮ್ಮ ಪಿ, ವಿಜಯಲಕ್ಷ್ಮಿ ಹೆಚ್ ಎಸ್  ಹಾಗೂ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.