
ತುಮಕೂರು, ಸೆ. ೨- ತುಮಕೂರಿನ ಶ್ರೀ ಕೃಷ್ಮ ಜನ್ಮಾಷ್ಠಮಿ ಸಮಿತಿ, ಜನಕಲ್ಯಾಣ ಟ್ರಸ್ಟ್, ಸಂಸ್ಕಾರ ಭಾರತೀ, ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಸಂಯುಕ್ತಾಶ್ರಯದಲ್ಲಿ ೩೭ನೇ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಸೆ. ೧೦ ರಂದು ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದು, ಇದರ ಆಂಗವಾಗಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಕೃಷ್ಮ ಜನ್ಮಾಷ್ಠಮಿ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಮಕ್ಕಳಿಗಾಗಿ ಮೂರು ಹಂತದಲ್ಲಿ ಭಗವದ್ಗೀತೆ ಕಂಠಪಾಠ, ದೇವರ ನಾಮ, ಚಿತ್ರಕಲಾ, ರಸಪ್ರಶ್ನೆ, ಏಕಪಾತ್ರಾಭಿನಯ, ಜನಪದ ಗೀತೆ, ಭಜನಾ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಸೆ. ೨ ರಂದು ಮತ್ತು ೩ ರಂದು ಕೆ.ಆರ್.ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ಏರ್ಪಡಿಸಲಾಗಿದೆ. ೪ ವರ್ಷದೊಳಗಿನ ಮಕ್ಕಳು, ೫ ರಿಂದ ೭ ವರ್ಷದವರೆಗಿನ ಮಕ್ಕಳು ಹಾಗೂ ೮ ರಿಂದ ೧೦ ವರ್ಷದ ವರೆಗಿನ ಹೀಗೆ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸೆ. ೧೦ ರಂದು ಶ್ರೀ ಕೃಷ್ಣ ವೇಷ ಸ್ಪರ್ಧೆ, ಬಾಲಕೃಷ್ಣ ಮತ್ತು ಕಿಶೋರ ಕೃಷ್ಣ ಎಂಬ ಮೂರು ಹಂತದಲ್ಲಿ ನಡೆಯಲಿದೆ. ಅಲ್ಲದೆ ದೊಡ್ಡವರಿಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಶ್ರೀ ಕೃಷ್ಣ ವೇಷಧಾರಿ ಮಕ್ಕಳಿಗೆ ಮರಳಿನಲ್ಲಿ ವಿಗ್ರಹ ಹುಡುಕುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಶಂಕರ್ ಮೂರ್ತಿ ಮಾತನಾಡಿ, ಕಳೆದ ೩೬ ವರ್ಷಗಳಿಂದಲೂ ನಿರಂತರವಾಗಿ ಮಕ್ಕಳಲ್ಲಿ ನೈತಿಕ ಮೌಲ್ಯ ಮತ್ತು ಸಂಸ್ಕಾರವನ್ನು ತುಂಬುವ ಸಲುವಾಗಿ ಶ್ರೀಕೃಷ್ಣ ವೇಷ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ೧೧೦೮ ಮಕ್ಕಳು ಸ್ಪರ್ಧೆ ಮಾಡಿದ್ದರೂ, ಈ ಬಾರಿ ಅದಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸೆಪ್ಟಂಬರ್ ೧೦ ರಂದು ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸ್ಟೆಪ್ಟಂಬರ್ ೨-೩ ರಂದು ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಅಂದಿನ ಶ್ರೀಕೃಷ್ಣವೇಷ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಸೆ. ೧೦ ರಂದು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ವಿಷ್ಣವರ್ಧನ್, ವಿಶ್ವಾಸ್ ಜ್ಯೂಯಲರ್ ಮಾಲೀಕರಾದ ಡಾ. ವಿಶ್ವಾಸ್.ಟಿ.ಜಿ ಹಾಗೂ ಶ್ರೀ ಸಿದ್ದಗಂಗಾ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ರಾಮಕೃಷ್ಣ ಅವರುಗಳು ಭಾಗವಹಿಸಲಿದ್ದಾರೆ. ಬಹುಮಾನದ ಜತೆಗೆ, ಭಾಗವಹಿಸಿದ್ದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಗೌರವಾಧ್ಯಕ್ಷ ಸಂದೀಪಗೌಡ, ಪ್ರಧಾನ ಕಾರ್ಯದರ್ಶಿ ರೇಖಾ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.