ಸೆ. 10ರಂದು ನಾರಾಯಣ ಗುರುಗಳ ಅದ್ದೂರಿ ಜಯಂತ್ಯುತ್ಸವ

ಕಲಬುರಗಿ,ಸೆ.3: ನಗರದಲ್ಲಿ ಸೆಪ್ಟೆಂಬರ್ 10ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ವಿನೋದಕುಮಾರ್ ಗುತ್ತೇದಾರ್ ಹಾಗೂ ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ್ ಗುತ್ತೇದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವ್ಯ ಮೆರವಣಿಗೆ, ಪ್ರತಿಭಾ ಪುರಸ್ಕಾರ, ನೂತನ ಸರ್ಕಾರಿ ನೌಕರರಿಗೆ ಗೌರವ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆಪ್ಟೆಂಬರ್ 10ರಂದು ಬೆಳಿಗ್ಗೆ ಹತ್ತು ಗಂಟೆಗೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ವಿವಿಧ ಕಲಾ ತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸಮಾರಂಭ ಜರುಗಲಿದೆ. ಈಡಿಗ ಸಮಾಜದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹೊಸದಾಗಿ ನೇಮಕವಾದ ಸಮಾಜದ ನೌಕರರಿಗೆ ಗೌರವ ಸನ್ಮಾನ ಮಾಡಲಾಗುವುದು. ಆಕಾಶವಾಣಿ ಅಧಿಕಾರಿ ಡಾ. ಸದಾನಂದ್ ಪೆರ್ಲ ಅವರು ವಿಶೇಷ ಉಪನ್ಯಾಸ ನೀಡುವರು. ಸಮಾರಂಭದಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಮಾಜಿ ಸಚಿವರು, ಮಾಜಿ ಶಾಸಕರು, ಸಮುದಾಯದ ಮುಖಂಡರು ಭಾಗವಹಿಸುವರು ಎಂದು ಅವರು ಹೇಳಿದರು.
ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿದ ಅವರು, ಮೂರ್ತಿ ಪ್ರತಿಷ್ಠಾಪನೆ, ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಸ್ಪಂದಿಸಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ರಾಜಾಪುರ ವರ್ತುಲ ರಸ್ತೆ ಇಲ್ಲವೇ ನಾಗನಹಳ್ಳಿ ವರ್ತುಲ ರಸ್ತೆಯಲ್ಲಿ ನಿರ್ಮಿಸುವ ಕುರಿತು ಆಶ್ವಾಸನೆ ದೊರಕಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಉಪೇಂದ್ರ ಗುತ್ತೇದಾರ್, ಬಸವರಾಜ್ ಗುತ್ತೇದಾರ್, ಅನಂತಯ್ಯ ಮುಸ್ತಾಜ್, ಮಹೇಶ್ ಯರಗೋಳ್, ಸಾಗರ್ ಗುತ್ತೇದಾರ್, ಅನಂತ್ ಗುತ್ತೇದಾರ್, ಹಣಮಯ್ಯ ಆಲಗೂರ್, ಶ್ರೀಮಂತ್ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.