
ಕಲಬುರಗಿ: ಸೆ.08 :ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸೆಪ್ಟೆಂಬರ್ 10ರಂದು ಸಂಜೆ 6 ಗಂಟೆಗೆ ಜರುಗಲಿರುವ ರಾಜ್ಯ ಮಟ್ಟದ ಸಾಂಸ್ಕøತಿಕ ಅನುಸಂಧಾನ ಕುರಿತು ಸಂವಾದ ಹಾಗೂ ಹೆಸರಾಂತ ನಾಟಕ ನಿರ್ದೇಶಕ ಶ್ರೀಪಾದ್ ಭಟ್ ಅವರ ನಿರ್ದೇಶನದ ಗಾಯಗಳು ನಾಟಕ ಪ್ರದರ್ಶನವನ್ನು ಚಿತ್ರನಟ ಹಾಗೂ ಚಿಂತಕ ಪ್ರಕಾಶ್ ರೈ ಅವರು ಉದ್ಘಾಟಿಸುವರು ಎಂದು ಕಲಬುರ್ಗಿ ಆರ್ಟ್ ಥಿಯೇಟರ್ ಅಧ್ಯಕ್ಷ ಸುನೀಲ್ ಮಾನಪಡೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಥಿಯೇಟರ್, ಅಂತರಂಗ ಸೇವಾ ಸಂಸ್ಥೆ, ರಂಗ ವೃಕ್ಷ ಕಲಾ ತಂಡ, ಸೂರ್ಯನಗರ ಸಾಂಸ್ಕøತಿಕ ಸೇವಾ ಸಂಘ ಸೇರಿ ನಾಲ್ಕು ರಂಗ ಸಂಸ್ಥೆಗಳು ವೃತ್ತಿ ರಂಗ ಕಲಾವಿದರಿಗೆ, ಸಂಘಟಕರಿಗೆ ಶಾಲಾ ರಂಗಭೂಮಿ, ಕಾಲೇಜು ರಂಗಭೂಮಿ, ಹವ್ಯಾಸಿ ರಂಗಭೂಮಿ, ರಾಜ್ಯ ಮಟ್ಟದ ರಂಗ ತರಬೇತಿ ಶಿಬಿರ, ಉಪನ್ಯಾಸ, ಕಿರು ಚಿತ್ರ ಪ್ರದರ್ಶನ ನೀಡುತ್ತ ಕಲ್ಯಾಣ ಕರ್ನಾಟಕದ ತತ್ವಪದ, ಗೀಗೀಪದ, ಡೊಳ್ಳು ಕುಣಿತ, ಹಲಿಗೆ, ಕೋಲಾಟ ಮುಂತಾದ ಅನೇಕ ಜಾನಪದ ಕಲಾ ಪ್ರಕಾರಗಳು ಶಾಲಾ, ಕಾಲೇಜುಗಳು ಹಂತದಿಂದ ತರಬೇತಿ ನೀಡಿ ಸಾಂಸ್ಕøತಿಕ ನೆಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದೆ ಎಂದರು.
ಈ ನಿಟ್ಟಿನಲ್ಲಿ ಸೆಪ್ಟೆಂಬರ್ 10ರಂದು ಹೆಸರಾಂತ ಚಿತ್ರನಟ ಪ್ರಕಾಶ್ ರೈ ಅವರು ನಗರಕ್ಕೆ ಆಗಮಿಸಲಿದ್ದು, ಅಂದು ಸಂವಾದದಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಸಾಹಿತಿ ಮಹಾಂತೇಶ್ ನವಲಕಲ್, ಡಾ. ಅಪ್ಪುಗೆರೆ ಸೋಮಶೇಖರ್, ಪ್ರೊ. ಶಿವಗಂಗಾ ರುಮ್ಮಾ, ಡಾ. ಕೆ. ಲಿಂಗಪ್ಪ, ಡಾ. ಅಜೀಮ್ ಪಾಶಾ, ಡಾ. ರಮೇಶ್ ಲಂಡನಕರ್, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಅನಿಲ್ ಟೆಂಗಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಭಾಗವಹಿಸುವರು ಎಂದು ಅವರು ಹೇಳಿದರು.
ವೇದಿಕೆಯ ಮೇಲೆ ಗೌರವ ಅಧೀಕ್ಷಕ ಅಭಿಯಂತರ ಸುರೇಶ್ ಶರ್ಮಾ, ಪ್ರೊ. ಈಶ್ವರ್ ಇಂಗನ್, ಶಂಭುಲಿಂಗ್ ಗುಂಡಗುರ್ತಿ, ರಾಜಗೋಪಾಲರೆಡ್ಡಿ, ರಾಜಕುಮಾರ್ ಕಪನೂರ್, ಡಾ. ಸುನೀಲ್ ಒಂಟಿ, ಲಿಂಗರಾಜ್ ತಾರಫೈಲ್, ಶಿವಾನಂದ್ ಹೊನಗುಂಟಿ, ಶ್ರೀಮತಿ ಗೀತಾ ಭರಣಿ, ಪ್ರಕಾಶ್ ಅವರಾದಕರ್ ಅವರು ಉಪಸ್ಥಿತರಿರುವರು. ಸಂವಾದ ಕಾರ್ಯಕ್ರಮದ ನಂತರ ಮೈಸೂರು ನಿರ್ದಿಗಂತ ರಂಗ ಸಂಸ್ಥೆಯಿಂದ ಗಾಯಗಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಇಡೀ ಜಗತ್ತು ಯುದ್ದೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿಮ್ಯಾಕ್ ಬೆತ್‍ಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಬೇದವಂತೂ ಇನ್ನೂ ಕ್ರೂರ. ಅವು ನಮಗೆ ನಾವೇ ಮಾಡಿಕೊಂಡ ಗಾಯಗಳಾಗಿವೆ. ಅವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆಯಿಲ್ಲ. ಅಂತಹ ಅಸಂಖ್ಯಾತ ಗಾಯಗಳು ಕಥೆಯಲ್ಲಿವೆ ಈ ನೆಲದ ತುಂಬ ಎಂದು ಅವರು ಹೇಳಿದರು.
ಯುದ್ಧ ಹಾಗೂ ಕೋಮು ಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ನಾಟಕದಲ್ಲಿ ರಂಗ ಚಿತ್ರವಾಗಿಸಲಾಗಿದೆ. ಅವು ಸಹಜವಾಗಿಯೇ ಮಹಿಳೆಯರ ನೋವಿನ ಸೊಲ್ಲುಗಳಾಗಿ ಪರಿಣಮಿಸಿವೆ. ನಮ್ಮಿಂದ ಎಣಿಸಲಾದಷ್ಟು ಗಾಯದ ಕಥೆಗಳಿವೆ. ಇಲ್ಲಿ ಎಣಿಸಲಾಗದ ಅಸಂಖ್ಯೆ ಕಥೆಗಳ ಬಗೆಗೂ ಸಹಾನುಭೂತಿ ಸಂತಾಪಗಳಿವೆ. ಇಲ್ಲಿ ಕಥೆಗಳಿವೆ, ಕವನಗಳಿವೆ, ನಾಟಕದ ಆಯ್ದ ಭಾಗಗಳಿವೆ. ಕಾದಂಬರಿಯ ಪುಟಗಳಿವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಬಿ. ಹರಿಕೃಷ್ಣ, ಮಲ್ಲಿಕಾರ್ಜುನ್ ದೊಡ್ಡಮನಿ, ರಾಜಕುಮಾರ್ ಎಸ್.ಕೆ., ಸಂತೋಷ್ ಮೇಲ್ಮನಿ ಮುಂತಾದವರು ಉಪಸ್ಥಿತರಿದ್ದರು.