ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ನೀಡಿಕೆ

ಬೆಂಗಳೂರು,ಆ.೨೭- ರಾಜ್ಯದಲ್ಲಿ ಸೆ. ೧ ರಿಂದ ಪ್ರತಿದಿನ ೫ ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗುವುದು. ಇದಕ್ಕಾಗಿ ಎಲ್ಲ ತಯಾರಿ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಪ್ರವಾಸದ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರತಿ ತಿಂಗಳು ೧.೫ ಕೋಟಿ ಡೋಸ್ ಲಸಿಕೆ ಪೂರೈಸುವಂತೆ ಕೇಂದ್ರದ ಆರೋಗ್ಯ ಸಚಿವರಿಗೆ ಕೋರಿದ್ದೇನೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದು, ಸೆ. ೧ ರಿಂದ ರಾಜ್ಯದಲ್ಲಿ ನಿತ್ಯ ೫ ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗುವುದು ಎಂದರು.
ಈಗಾಗಲೇ ಒಂದು ದಿನ ಪ್ರಾಯೋಗಿಕವಾಗಿ ದಿನಕ್ಕೆ ೫ ಲಕ್ಷ ಡೋಸ್ ಲಸಿಕೆಯನ್ನು ನೀಡುವ ಮೂಲಕ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಹೊಸ ಜವಳಿ ಪಾರ್ಕ್
ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರಾಜ್ಯಕ್ಕೆ ಜವಳಿ ಪಾರ್ಕ್‌ನ್ನು ಮಂಜೂರು ಮಾಡುವಂತೆ ನಿನ್ನೆ ಜವಳಿ ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೇನೆ. ಪ್ರಸ್ತಾವನೆಯನ್ನು ಕಳುಹಿಸಿಕೊಡಿ. ಅದಕ್ಕೆ ಒಪ್ಪಿಗೆ ನೀಡಿ ಕೇಂದ್ರದಿಂದ ನೀಡಬೇಕಾದ ಸಬ್ಸಿಡಿಯನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದ ಜವಳಿ ಕಂಪನಿಗಳೊಂದಿಗೆ ಮಾತನಾಡಿ ರಾಜ್ಯದಲ್ಲಿ ಜವಳಿ ಪಾರ್ಕ್‌ಗೆ ನೆರವು ನೀಡುವುದಾಗಿ ಹೇಳಿದ್ದಾರೆ ಎಂದರು.
ಈ ಜವಳಿ ಪಾರ್ಕ್ ಸ್ಥಾಪನೆಯಿಂದ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸಿಗಲಿವೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ. ರಾಜ್ಯಸರ್ಕಾರ ಆದಷ್ಟು ಶೀಘ್ರ ಜವಳಿ ಪಾರ್ಕ್ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.
ಜಿಎಸ್‌ಟಿ ಮುಂದುವರಿಕೆಗೆ ಮನವಿ
ದೆಹಲಿಯಲ್ಲಿ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಜಿಎಸ್‌ಟಿ ಪರಿಹಾರವನ್ನು ಇನ್ನೂ ೩ ವರ್ಷಗಳ ಕಾಳ ಮುಂದುವರೆಸುವಂತೆ ಹಾಗೂ ೧೫ನೇ ಹಣಕಾಸು ಆಯೋಗದ ಅನುದಾನ ಹೆಚ್ಚಳ ಮಾಡುವಂತೆಯೂ ಮನವಿ ಮಾಡಿದ್ದೇನೆ ಎಂದರು.
ಕೇಂದ್ರದ ಜಲಶಕ್ತಿ ಸಚಿವರ ಜತೆ ಮೇಕೆದಾಟು, ಕೃಷ್ಣಾ ಮೇಲ್ದಂಡೆ ೩ನೇ ಹಂತ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಾಗೆಯೇ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಸುಪ್ರೀಂಕೋರ್ಟ್‌ನಲ್ಲಿರುವ ಅಂತರ್ ರಾಜ್ಯ ಜಲವಿವಾದಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಬಗ್ಗೆಯೂ ಚರ್ಚೆ ಮಾಡಿರುವುದಾಗಿ ಹೇಳಿದರು.

ದೆಹಲಿ ಪ್ರವಾಸದ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆಗಳನ್ನು ಪಕ್ಷದ ವರಿಷ್ಠರ ಜತೆ ಚರ್ಚಿಸಿಲ್ಲ. ಮುಂದಿನ ಭಾರಿ ದೆಹಲಿಗೆ ತೆರಳಿದಾಗ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಕುಟುಂಬಸ್ಥರಿಗೆ ಅರೋಗ್ಯ ಸರಿ ಇರದ ಕಾರಣ ದೆಹಲಿ ಭೇಟಿ ಸಂದರ್ಭದಲ್ಲಿ ನಡ್ಡಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಬಾರಿ ದೆಹಲಿಗೆ ತೆರಳಿದಾಗ ಅವರನ್ನು ಭೇಟಿ ಮಾಡಿ ಸಂಪುಟದಲ್ಲಿ ಖಾಲಿ ಇರುವ ೪ ಸ್ಥಾನಗಳಲ್ಲಿ ಭರ್ತಿ ಮಾಡುವ ಬಗ್ಗೆ ಚರ್ಚಿಸುತ್ತೇನೆ ಎಂದರು.