
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೨೨; ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ ೯ ರಂದು ಬೆಳಗ್ಗೆ ೧೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷ ಆರ್.ಪ್ರತಾಪ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.೨೦ ರಂದು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಲ್ಲಿರುವ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಚಿಂತನಾ ಸಭೆ ನಡೆಸಲಾಗಿತ್ತು ಈ ವೇಳೆ ಸುಮಾರು ೫೦೦ ಜನಭಾಗವಹಿಸಿದ್ದರುಸರ್ಕಾರದಿಂದ ಸೌಲಭ್ಯ ಹಾಗೂ ನಿಗಮಮಂಡಳಿ ನೇಮಕಕ್ಕೆ ಒತ್ತಾಯಿಸುವ ಬಗ್ಗೆ ಚರ್ಚೆ ನಡೆಲಾಯಿತು ಎಂದರು.ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಎಲ್ಲಾ ಜಿಲ್ಲೆಗಳಿಂದ ಸುಮಾರು ೧೧ ಬಸ್ಸುಗಳಿಂದ ಜನರು ಆಗಮಿಸಲಿದ್ದಾರೆ. ಈ ಹಿಂದೆ ಆರ್ಯ ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆಯಾಗಿತ್ತು ಆದರೆ ಅನುದಾನ ಬಿಡುಗಡೆಯಾಗಿರಲಿಲ್ಲ .ಈಗಿನ ಸಿಎಂ ಸಿದ್ದರಾಮಯ್ಯ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಆದರೆ ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಂಡಳಿ ಮೂಲಕ ಸುಮಾರು ೨ ವರ್ಷದಿಂದ ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ .ಮುಂದಿನಜನವರಿಯಲ್ಲಿ ಉಡುಪಿಯಲ್ಲಿ ಸಮಾವೇಶ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು.ರಾಜ್ಯದಲ್ಲಿ ಈಡಿಗ, ಜನ ನಾಮಧಾರಿ,ಧೀವರ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಜನ ಸಮುದಾಯದ ಸುಮಾರು 70 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಇದು ಕರ್ನಾಟಕದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. ಸಮಾಜದ ಧ್ವನಿಯನ್ನು ಕುಗ್ಗಿಸುವ ಹಾಗೂ ಅವರ ರಾಜಕೀಯ ಅಧಿಕಾರ ಸ್ಥಾನಮಾನಗಳಿಂದ ದೂರ ಮಾಡಲಾಗುತ್ತಿದೆ.
ಹಿಂದುಳಿದ ಸಮುದಾಯದ ಉಳಿವಿಗಾಗಿ ಮತ್ತು ಆರ್ಥಿಕ ,ಸಾಮಾಜಿಕ ,ಶೈಕ್ಷಣಿಕ,ರಾಜಕೀಯ ಶಕ್ತಿಯ ಸಂವರ್ಧನೆ ಮೂಲಕ ನಮ್ಮ ಸಮುದಾಯ ದೊಡ್ಡ ಶಕ್ತಿಯಾಗಿ ಬೆಳೆದು ವಿರಾಟ ಸ್ವರೂಪ ಪಡೆಯಲು ಮುನ್ನುಗ್ಗಬೇಕಾದ ಕಾಲ ಸನ್ನಿಹಿತವಾಗಿದೆ. ಸಮಾಜದ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧಿಪತಿಗಳಾದ ಡಾ. ಶ್ರೀ ಪ್ರಣವಾನಂದ ಮಹಾಸ್ವಾಮಿಗಳವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಮತ್ತು ದೇಶದಾದ್ಯಂತ ಸಂಘಟನೆ ಮಾಡುವ ಅವಶ್ಯಕತೆಯಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಇ.ಎಸ್. ವೆಂಕಟೇಶ್, ಇ. ರಾಜೇಶ್,ಟಿ.ಆರ್. ಜ್ಞಾನೇಶ್, ಬಿ.ಕೆ. ದಾನೇಶ್, ಗಿರೀಶ್, ಇ.ಆರ್. ಹಾಲಸ್ವಾಮಿ, ಎಸ್.ಎಂ. ಸಂತೋಷ್,ಪ್ರಭಾಕರ್ ,ಬಾಲರಾಜ್ ಇನ್ನಿತರರಿದ್ದರು.