
ರಾಯಚೂರು,ಸೆ .೭- ನಗರದ ಬೋಳಮಾನದೊಡ್ಡಿ ರಸ್ತೆಯ ತುಳಜಾ ಭವಾನಿ ದೇವಸ್ಥಾನದ ಬಳಿ ನೂತನವಾಗಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ ೧೧ರಂದು ಬೆಳಿಗ್ಗೆ ೧೦:೩೦ಕ್ಕೆ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಪ್ಪ ಏಗನೂರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಕಳೆದ ೨೦ ವರ್ಷಗಳಿಂದ ಆರೊಗ್ಯ ಶಿಬಿರ, ಶಿಕ್ಷಕರಿಗೆ ತರಬೇತಿ, ಸ್ವಚ್ಛತೆ, ನೈರ್ಮಲ್ಯದ ಜಾಗೃತಿ ಹಾಗೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಆದರೆ ಸಂಘದ ಸ್ವಂತ ಕಟ್ಟಡ ಇರದ ಕಾರಣ ಸರ್ಕಾರಿ ನೌಕರರ ಭವನದಲ್ಲಿಯೇ ಕಾರ್ಯಕ್ರಮ ನಿರ್ವಹಣೆ ಮಾಡಬೇಕಾಗಿತ್ತು.
ನಮ್ಮ ಸಂಘಟನೆಯ ಮನವಿಯ ಮೇರೆಗೆ ಆರ್ ಡಿಎ ಸಿ ಎ ಸೈಟ್ ನಲ್ಲಿ ಕಚೇರಿ ನಿರ್ಮಾಣಕ್ಕೆ ಸಚಿವ ಎನ್ ಎಸ್ ಬೋಸರಾಜು ಅವರು ಕಳೆದ ೫ ವರ್ಷಗಳ ಹಿಂದೆ ವಿಧಾನ ಪರಿಷತ್ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ೫ ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಆನಂತರ ನನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿ ಈಗ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ದ ವಾಗಿದೆ ಎಂದುರು.
ಸಚಿವ ಎನ್ ಎಸ್ ಬೋಸರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಶಾಕಸ ಡಾ.ಶಿವರಾಜ ಪಾಟೀಲ, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ಹಾಗೂ ಸಂಘದ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿ ಮಕ್ಬೂಲ್ ಹುಸೇನ್, ಕಾರ್ಯದರ್ಶಿ ಮಲ್ಲಯ್ಯ ಕಲ್ಲೂರು, ದಾನಮ್ಮ, ಬಿ.ತಿಮ್ಮಾರೆಡ್ಡಿ ಇದ್ದರು.