
ರಾಯಚೂರು,ಸೆ.೫- ಮುಖಾ ಮುಖಿ ರಂಗ ಸಂಸ್ಥೆ ವತಿಯಿಂದ ಸೆಪ್ಟೆಂಬರ್ ೭ರಂದು ನಿರ್ದಿಗಂತ ತಂಡದ ಗಾಯಗಳು ಎಂಬ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು
ಮುಖಾ ಮುಖಿ ರಂಗ ಸಂಸ್ಥೆ ಕಾರ್ಯದರ್ಶಿ ಲಕ್ಷ್ಮಣ ಮಂಡಲಗೇರಾ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಟಕವು ನಗರದ ಕರ್ನಾಟಕ ಸಂಘದಲ್ಲಿ ಸಂಜೆ ೬-೩೦ ಕ್ಕೆ ಪ್ರದರ್ಶನಗೊಳ್ಳಲಿದೆ.
ಮುಖಾಮುಖಿ ರಂಗ ತಂಡವು ಕಳೆದ ನಾಲ್ಕೈದು ವರ್ಷಗಳಿಂದ ಸಕ್ರಿಯವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವು ಬೀದಿ ನಾಟಕಗಳನ್ನು ಮಾಡಿ ಕಳೆದ ವರ್ಷ ಸಂಕ್ರಾಂತಿ ಎಂಬ ನಾಟಕವನ್ನು ಪ್ರದರ್ಶನ ನೀಡಿತ್ತು, ಈಗ ಇನ್ನೊಂದು ಹೆಜ್ಜೆಯಾಗಿ , ಬೇರೆ ಭಾಗಗಳಿಂದ ಬರುವ ರಂಗ ತಂಡಗಳ ನಾಟಕಗಳನ್ನು ಆಯೋಜಿಸಲು ಮುಂದಾಗಿದೆ ಎಂದರು.
ಸಿನಿಮಾ ಹಾಗೂ ರಂಗಭೂಮಿಯ ನಟರೂ ಆಗಿರುವ ಪ್ರಕಾಶ ರಾಜ್ ಅವರ ಕನಸಿನ ಕೂಸಾದ ಈ ನಿರ್ದಿಗಂತ ತಂಡವು ರಾಜ್ಯದಲ್ಲಿ ಒಂದು ವಿಶಿಷ್ಟ ಸಾಂಸ್ಕೃತಿಕ ಚಳುವಳಿಯ ಆಶಯದಿಂದ ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ನಡೆಯುವ ಅಘಟಿತ ಸಂಗತಿಗಳಿಗೆ ಹತ್ತಿರವಾದ ವಿಷಯಗಳನ್ನಿಟ್ಟುಕೊಂಡು ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ ತಯಾರಾದ ಈ ನಾಟಕವನ್ನು ರಾಜ್ಯಾದ್ಯಂತ ತಿರುಗಾಟ ಮಾಡಲು ಮುಂದಾಗಿರುವುದು ವಿಶೇಷ.ಪ್ರಕಾಶ್ ರಾಜ್ ಅವರ ಹಲವು ವರ್ಷಗಳ ಕನಸಿನ ರಂಗಭೂಮಿಯನ್ನು ಮತ್ತೆ ಎಲ್ಲಾ ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಅನುಕೂಲವಾಗುವಂತೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿಯಲ್ಲಿ ನಿರ್ಮಿಸಿರುವ ಒಂದು ಪುಟ್ಟ ರಂಗಶಾಲೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗದ ೧೫ ಜನ ಕಲಾವಿದರನ್ನು ಒಟ್ಟುಗೂಡಿಸಿ ರಂಗಭೂಮಿಯ ಹೊಸ ಆಲೋಚನೆಯ ಆಯಾಮಗಳೊಂದಿಗೆ, ಈಗಾಗಲೇ ರಾಜ್ಯದಲ್ಲಿ ಹಲವು ರಂಗ ಮಂದಿರಗಳಿದ್ದರೂ ಒಂದು ನಾಟಕ ತಾಲೀಮು ಮಾಡಲು ಜಾಗಗಳ ಕೊರತೆ ಎದ್ದು ಕಾಣುತ್ತಿದೆ ಜೊತೆಗೆ ರಾಜ್ಯದಲ್ಲಿ ಹಲವು ರೆಪರ್ಟರಿ ಗಳಿದ್ದಾಗಲೂ ಸಾಂಸ್ಕೃತಿಕ ಲೋಕದ ಇಂಥದೊಂದು ಹೊಸ ಯೋಚನೆ, ಆಶಯಗಳೊಂದಿಗೆ ಈ ನಿರ್ದಿಗಂತ ತಂಡ ಹುಟ್ಟಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ನಿರ್ಮಲಾ ವೇಣುಗೋಪಾಲ, ಸಂಗಸ್ವಾಮಿ, ಸಾಗರ್, ಸುನಿಲ್ ಇದ್ದರು.