ಸೆ.೩ ರಾಹುಲ್ ಯುರೋಪ್ ಪ್ರವಾಸ

ನವದೆಹಲಿ,ಆ.೩೦- ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೆಪ್ಟಂಬರ್ ೩ ರಿಂದ ೧೪ರ ವರೆಗೆ ಯೂರೋಪ್ ಪ್ರವಾಸ ಕೈಗೊಳ್ಳಲಿದ್ದು ವಿದ್ಯಾರ್ಥಿಗಳು, ಭಾರತೀಯ ಸಮುದಾಯ ಹಾಗು ಅಲ್ಲಿನ ಸಂಸದರೊಂದಿಗೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಯುರೋಪ್‌ಗೆ ಭೇಟಿ ಸಮಯದಲ್ಲಿ ಪ್ಯಾರಿಸ್‌ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಬೆಲ್ಜಿಯಂನಲ್ಲಿ ಯುರೋಪ್‌ನ ವಿವಿಧ ಸಂಸದರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಬಳಿಕ ಓಸ್ಲೋದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ ೩ ರಂದು ಯುರೋಪ್ ಪ್ರವಾಸ ಕೈಗೊಳ್ಳಲಿದ್ದು ಸೆ. ೭ ರಂದು ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಸಂಸದರನ್ನು ಭೇಟಿಯಾಗಲಿದ್ದಾರೆ. ಸೆ. ೮ ರಿಂದ ೯ ರವರೆಗೆ ಪ್ಯಾರಿಸ್ ಪ್ರವಾಸದಲ್ಲಿರಲಿದ್ದು
ಪಿಯರೆ ಮತ್ತು ಮೇರಿ ಕ್ಯೂರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿರುವ ರಾಹುಲ್ ಗಾಂಧಿ ಸೆ. ೯ ರಂದು ಫ್ರೆಂಚ್ ಸಂಸದರನ್ನು ಭೇಟಿಯಾಗಲಿದ್ದಾರೆ. ಸೆ.೧೦ ರಂದು ನಾರ್ವೆ ತಲುಪಲಿರುವ ಅವರು ಸೆ. ೧೧ ರಂದು ನಾರ್ವೆಯಲ್ಲಿರುವ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಲಿದ್ದಾರೆ.ಸೆಪ್ಟೆಂಬರ್ ೧೪ ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರ ವಿದೇಶ ಭೇಟಿ ಸಮಯದಲ್ಲಿ ಸಂವಾದ, ಮಾತುಕತೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮ ನಿಗಧಿ ಪಡಿಸಲಾಗಿದೆ ಎಂದು ತಿಳಿಸಲಾಗಿದೆ.