ಸೆ.೩೦ ಕ್ಕೆ ಪಂಚಮಸಾಲಿ ಸಮಾಜದಿಂದ ಮೀಸಲಾತಿಗಾಗಿ ಹೋರಾಟ

ದಾವಣಗೆರೆ. ಸೆ.೨೩; ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸೆ.೩೦ ರಂದು ನಗರದ ತ್ರಿಶೂಲ್ ಕಲಾಭವನದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಅಂದು ಮಧ್ಯಾಹ್ನ ೩ ಕ್ಕೆ ಸಮಾಜದ ಗುರುಗಳಾದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ನಗರದ ಸಂಗೊಳ್ಳಿರಾಯಣ್ಣ ವೃತ್ತದಿಂದ ಐದು ಸಾವಿರ ಬೈಕ್ ಗಳ ರ್ಯಾಲಿ ಮೂಲಕ ಬರಮಾಡಿಕೊಳ್ಳಲಾಗುವುದು ಎಂದು ಪಂಚಮಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨ಎ ಮೀಸಲಾತಿಗಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದರು ಕೂಡ ಪ್ರಯೋಜನವಾಗಿಲ್ಲ.ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಮೀಸಲಾತಿ ನೀಡುವ ಕುರಿತು ಭರವಸೆ ನೀಡಿದ್ದರು ಆ ಸಮಯದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿಯವರು ಮಧ್ಯಸ್ಥಿಕೆ ವಹಿಸಿದ್ದರು. ಇದೀಗ ಅವರೇ ಸಿಎಂ ಆಗಿದ್ದಾರೆ. ನಮ್ಮ ಬೇಡಿಕೆ ಈಡೇರುವ ಭರವಸೆಯಿದೆ.ಮೀಸಲಾತಿಗಾಗಿ ಸರ್ಕಾರದ ಗಮನಸೆಳೆಯಲು ಸೆ.೩೦ ಕ್ಕೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಅಂದು ಶ್ರೀಗಳನ್ನು ಮೂರು ಆನೆಗಳಿಂದ ಮೆರವಣಿಗೆ ಮೂಲಕ, ವಾದ್ಯಗೋಷ್ಠಿಗಳೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಗುವುದು.ಸಂಜೆ ೫ ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರ ಜನ ಸೇರುವ ನಿರೀಕ್ಷೆಯಿದೆ.ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್,ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಸೇರಿದಂತೆ  ಸಮಾಜದ ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ.ಈಗಾಗಲೇ ರಾಜ್ಯದಾದ್ಯಂತ ಶ್ರೀಗಳು ಸಂಚರಿಸಿ ಸಮಾಜಬಾಂಧವರನ್ನು ಸಂಘಟಿಸಿದ್ದಾರೆ.ಸಮಾವೇಶದ ನಂತರ ಸರ್ಕಾರ  ಮೀಸಲಾತಿ ನೀಡುವ ಭರವಸೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್,ಶಂಕರಪ್ಪ,ಮಹಾಂತೇಶ್ ಒಣರೊಟ್ಟಿ,ಜಯಪ್ರಕಾಶ್, ಬಾತಿ ಶ್ರೀಧರ್,ಎಸ್ ಓಂಕಾರಪ್ಪ,ಪ್ರಶಾಂತ್ ಮತ್ತಿತರರಿದ್ದರು.

ದಾವಣಗೆರೆ ಶಕ್ತಿ ಕೇಂದ್ರ ಇದ್ದಂತೆ. ಇಲ್ಲಿನ ಕೂಗೂ ವಿಧಾನಸೌಧದ ಒಳಗೆ ಹಾಗೂ ಹೊರಗೆ ಕೇಳುತ್ತದೆ.ಮಾಜಿ ಸಿಎಂ ಯಡಿಯೂರಪ್ಪ ಧೀಮಂತ ನಾಯಕ ಅವರು ಲಿಂಗಾಯತ ಪರಂಪರೆಯ ಪುಟ ಸೇರಿದ್ದಾರೆ.ಅವರ ಅವಧಿಯಲ್ಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬಹುದಾಗಿತ್ತು.ಸಮುದಾಯದ ಒಳಿತಿಗಾಗಿ ಅವರು ಸಾಕಷ್ಟು ಕೆಲಸಮಾಡಿದ್ದಾರೆ.ಕೇವಲ ಪಂಚಮಸಾಲಿ ಅಷ್ಟೇ ಅಲ್ಲದೇ ಎಲ್ಲಾ ಲಿಂಗಾಯತ ಪಂಗಡಗಳಿಗೆ ಮೀಸಲಾತಿ ನೀಡಿದರೆ ಯಾವುದೇ ಅಭ್ಯಂತರವಿಲ್ಲ ಎಲ್ಲರೂ ನೀಡಿದರೆ ಸ್ವಾಗತಿಸುತ್ತೇವೆ.ಈ ಬಗ್ಗೆ ಯಾವುದೇ ವಿರೋಧವಿಲ್ಲ.ಪ್ರತ್ಯೇಕ ಧರ್ಮದ ಹೋರಾಟ ಮಾಡುವವರು ಹಿಂದೆ ಸರಿದಿದ್ದಾರೆ.ಎಲ್ಲರೂ ಸೇರಿ ಒಂದಾಗಿರಬೇಕು ಎಂಬುದು ನಮ್ಮ ಅಭಿಲಾಷೆ.
– ಹೆಚ್ ಎಸ್ ಶಿವಶಂಕರ್.
ಮಾಜಿ ಶಾಸಕರು.


ಮೂರನೇ ಮಠ ಸ್ಥಾಪನೆ ವಿಚಾರ ಮುನ್ನೆಲೆಗೆ ಬಂದಿತ್ತು ಆದರೀಗ ತಿಳಿಗೊಂಡಿದೆ.ಪೀಠಾಧಿಪತಿಗಳನ್ನು ಅಷ್ಟೇ ಸಮಾಜ ಗಮನಿಸುತ್ತದೆ.ಸಣ್ಣ ಪುಟ್ಟ ಮಠಾಧೀಶರನ್ನು ಪರಿಗಣಿಸಿಲ್ಲ ಎಂಬ ಕೊರಗು ಅವರಲ್ಲಿತ್ತು ಅದು ಸಹಜ ಅದೆಲ್ಲವನ್ನೂ ನೀಗಿಸಲು ಎಲ್ಲರನ್ನೂ ಸೆ.೩೦ ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.ಇದಷ್ಟೇ ಅಲ್ಲ ವಾಲ್ಮೀಕಿ, ಹಾಲುಮತ ಸಮಾಜದವರೂ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ ಅವರಿಗೆ ನಮ್ಮ ಬೆಂಬಲವಿದೆ