ಸೆ. ೨೯ ಕರ್ನಾಟಕ ಬಂದ್

ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಮತ್ತು ರಾಜ್ಯದ ಸಂಸದರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು. ಮುಖಂಡರುಗಳಾದ ಸಾ.ರಾ. ಗೋವಿಂದು, ಕೆ.ಆರ್. ಕುಮಾರ್, ಮಂಜುನಾಥ್ ದೇವ, ಹೆಚ್.ವಿ. ಗಿರೀಶ್ ಗೌಡ, ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು, ಸೆ. ೨೪- ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿರುವ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಸೆ. ೨೯ ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್‌ರವರು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಈ ತಿಂಗಳ ೨೯ ರಂದು ಕರ್ನಾಟಕ ಬಂದ್‌ಗೆ ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ನಾಳೆ ಎಲ್ಲ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳೂ ಸೇರಿದಂತೆ ಎಲ್ಲ ಮುಖಂಡರ ಸಭೆ ನಡೆಸಿ ಕರ್ನಾಟಕ ಬಂದ್‌ಗೆ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಹೇಳಿದರು.
ತುರ್ತು ಅಧಿವೇಶನಕ್ಕೆ ಆಗ್ರಹ
ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು
ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು, ರಾಜ್ಯದ ಲೋಕಸಭಾ ಸದಸ್ಯರು ಕೂಡಲೇ ರಾಜೀನಾಮೆ ನೀಡಬೇಕು. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದಕ್ಕೆ ಕೂಡಲೇ ತುರ್ತು ವಿಧಾನ ಮಂಡಲದ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಮುಖಂಡರಾದ ಡಾ. ರಾಜ್ ಅಭಿಮಾನ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ. ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಕನ್ನಡ ಪರ ಹೋರಾಟಗಾರರಾದ ಹೆಚ್.ವಿ ಗಿರೀಶ್‌ಗೌಡ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಇವರುಗಳನ್ನು ವಶಕ್ಕೆ ಪಡೆದರು. ಈ ಹಂತದಲ್ಲಿ ಪೊಲೀಸರು ಹಾಗೂ ಕನ್ನಡ ಚಳವಳಿಗಾರರ ನಡುವೆ ಮಾತಿನ ಚಕಮಕಿ ವಾಗ್ವಾದ ನಡೆಯಿತು.

ಬಂದ್ ಕೈ ಬಿಡಿ ಪರಂ ಮನವಿ
ಸೆಪ್ಟೆಂಬರ್ ೨೬ರ ಬೆಂಗಳೂರು ಬಂದ್‌ನ್ನು ಕೈ ಬಿಡುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ. ಬೆಂಗಳೂರು ಬಂದ್‌ನಿಂದ ಸಮಸ್ಯೆ ಪರಿಹಾರ ಆಗಲ್ಲ, ಬಂದ್‌ನ್ನು ವಾಪಸ್ ತೆಗೆದುಕೊಳ್ಳಿ ಎಂದು ಅವರು ಬಂದ್‌ಗೆ ಕರೆ ನೀಡಿರುವ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರ ಹಕ್ಕು, ಪ್ರತಿಭಟನೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗಬಾರದು. ಸಾರ್ವಜನಿಕ ಆಸ್ತಿಗೂ ನಷ್ಟ ಉಂಟು ಮಾಡಬಾರದು. ಜನರಿಗೂ ತೊಂದರೆಯಾಗಬಾರದು ಎಂದರು.
ಬಂದ್ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಒಂದು ಸಂದೇಶ ಕೊಟ್ಟ ಹಾಗೆ ಆಗುತ್ತದೆ ಎಂದು ಬಂದ್ ಮಾಡುತ್ತಿರಬಹುದು. ಬಂದ್‌ನಿಂದ ಹೆಚ್ಚೇನು ಪ್ರಯೋಜನವಾಗದು, ಹಾಗಾಗಿ ಬಂದ್‌ನ್ನು ವಾಪಸ್ ಪಡೆಯುವಂತೆ ಮನವಿ ಮಾಡುತ್ತೇನೆ. ಸರ್ಕಾರ ಮನವಿ ಮಾಡಿದ ಮೇಲೂ ಬಂದ್ ಮಾಡುವುದು ಸಂಘಟನೆಗಳ ವಿವೇಚನೆಗೆ ಬಿಟ್ಟದ್ದು ಎಂದರು.
ಬಂದ್ ಸಂದರ್ಭದಲ್ಲಿ ಎಲ್ಲ ರೀತಿಯ ಬಿಗಿ ಭದ್ರತೆಯನ್ನು ಮಾಡುತ್ತೇವೆ. ಅಹಿತಕರ ಘಟನೆಗಳಾಗದಂತೆ ಕಟ್ಟೆಚ್ಚರ ವಹಿಸುವಂತೆ ಸಚಿವ ಪರಮೇಶ್ವರ್ ಹೇಳಿದರು.

ಬಂದ್ ಸ್ವರೂಪ ಚರ್ಚೆ: ಕುರುಬೂರು
ಸೆಪ್ಟೆಂಬರ್ ೨೬ ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ, ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬಗ್ಗೆ ಮಾಹಿತಿ ಬಂದಿದೆ. ಆ ಬಂದ್‌ಗೂ ನಮ್ಮ ಬೆಂಬಲವಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಬೆಂಗಳೂರು ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಇಂದು iಧ್ಯಾಹ್ನ ೩ ಗಂಟೆಗೆ ವಿವಿಧ ಸಂಘಟನೆಗಳ ಸಭೆ ಇದೆ. ಆ ಸಭೆಯಲ್ಲಿ ಬಂದ್‌ನ ಸ್ವರೂಪದ ಬಗ್ಗೆ ತೀರ್ಮಾನಗಳನ್ನು ಮಾಡುತ್ತೇವೆ. ಸದ್ಯಕ್ಕಂತೂ ಬೆಂಗಳೂರು ಬಂದ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.