ಸೆ.೨೯ ಅಖಂಡ ಕರ್ನಾಟಕ ಬಂದ್

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದರ ಹಿನ್ನೆಲೆ ಇಂದು ಬೆಳಿಗ್ಗೆ ನಗರ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪ್ರವೀಣ್ ಕುಮಾರ್ ಶೆಟ್ಟಿ, ಸಾ.ರಾ. ಗೋವಿಂದು, ಕೆ.ಆರ್. ಕುಮಾರ್, ಎನ್. ಮೂರ್ತಿ, ಮಂಜುನಾಥ್ ದೇವ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನಾಳೆ ಬೆಂಗಳೂರು ಬಂದ್

ಬೆಂಗಳೂರು, ಸೆ.೨೫- ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡಬಾರದೆಂದು ಒತ್ತಾಯಿಸಿ ಕರೆ ನೀಡಿದ್ದ ನಾಳೆಯ ಬೆಂಗಳೂರು ಬಂದ್ ಹೋರಾಟಕ್ಕೆ ಕನ್ನಡ ಒಕ್ಕೂಟವು ಬೆಂಬಲ ಸೂಚಿಸಿಲ್ಲ. ಸೆಪ್ಟೆಂಬರ್ ೨೯(ಶುಕ್ರವಾರ) “ಅಖಂಡ ಕರ್ನಾಟಕ ಬಂದ್” ಮಾಡುವುದಾಗಿ ಕನ್ನಡ ಒಕ್ಕೂಟ ಘೋಷಿಸಿದೆ. ಆದರೆ ನಾಳಿನ ಬೆಂಗಳೂರು ಬಂದ್ ನಡೆಯಲಿದೆ ಎಂದು ಜಲಸಂರಕ್ಷಣಾ ಸಮಿತಿ ಅಧ್ಯಕ್ಷ ಕುರುಬುರು ಶಾಂತಕುಮಾರ್ ಹೇಳಿದ್ದಾರೆ.ನಾಳಿನ ಬೆಂಗಳೂರು ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ನೀಡಿದರೆ ಕೆಲವು ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಹಾಗಾಗಿ ಬೆಂಗಳೂರು ಬಂದ್ ಯಶಸ್ವಿಯಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ.ನಗರದಲ್ಲಿಂದು ಖಾಸಗಿ ಹೋಟೆಲ್ ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ರೈತ ಹಾಗೂ ಕನ್ನಡ ಪರ ಹೋರಾಟಗಾರರು, ನಾಳೆ ಬೆಂಗಳೂರು ಬಂದ್ ನಡೆಸಿದರೆ, ಯಾವುದೇ ಪರಿಣಾಮ ಬೀರಲ್ಲ. ಹಾಗಾಗಿ, ಸೆ.೨೯ರಂದು ಕರ್ನಾಟಕ ಬಂದ್ ಚಳವಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಹೇಳಿದರು.ಇನ್ನೂ, ಈ ಬಂದ್ ಗೆ ಈಗಾಗಲೇ ರಾಜ್ಯ ವ್ಯಾಪಿ ೧೨೦೦ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಜತೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಖಾಸಗಿ ವಾಹನ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಅಂದು ಬಹುತೇಕ ಕರ್ನಾಟಕ ಸ್ತಬ್ಧಗೊಳ್ಳಲಿದೆ.ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಒಕ್ಕೂಟದ ವಾಟಾಳ್ ನಾಗರಾಜ್, ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಿದ್ದು, ಇದರಲ್ಲಿ ರಾಜಕೀಯ ಪಕ್ಷಗಳ ಕೈವಾಡ ಇದೆ.ಹಾಗಾಗಿ, ಯಾವುದೇ ಕಾರಣಕ್ಕೂ ಈ ಬಂದ್ ಬೆಂಬಲ ನೀಡಲ್ಲ.ಆದರೆ, ಇದೇ ೨೯ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಹೇಳಿದರು.ನಾಳೆ ನಡೆಯುವ ಬಂದ್ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ ಏಕೆಂದರೆ ಈ ಬಂದ್ ನಡೆಸುವ ಮುನ್ನ ನಮ್ಮೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಜೊತೆಗೆ ಮಂಗಳವಾರ ಬೆಂಗಳೂರು ಬಂದ್ ಬಿಟ್ಟು ಸೆಪ್ಟೆಂಬರ್ ೨೯ ರಂದು ಕರ್ನಾಟಕ ಬಂದ್ ನಡೆಸಿ ಪರಿಣಾಮಕಾರಿಯಾಗಿ ಒಗ್ಗೂಡಿ ಹೋರಾಟ ನಡೆಸೋಣ ಎಂದು ಮನವಿ ಮಾಡಿಕೊಂಡರು ಒಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬೆಂಗಳೂರು ಬಂದ್ ನಡೆಸಿದರೆ ಬರೀ ನಗರ ವಲಯಕ್ಕೆ ಮಾತ್ರ ಈ ಹೋರಾಟ ಸೀಮಿತವಾಗಲಿದೆ ಆದರೆ ಕಾವೇರಿ ನದಿ ನೀರು ಬೆಂಗಳೂರು ಮಾತ್ರವಲ್ಲದೆ ನಾಲ್ಕೈದು ಜಿಲ್ಲೆಗಳ ವಿಷಯವಾಗಿದೆ.ಜೊತೆಗೆ ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರುವ ಜಲ ವಿವಾದ ಆಗಿದ್ದು ಇದಕ್ಕೆ ಉತ್ತರ ಕರ್ನಾಟಕ ಭಾಗದ ಜನರು ಸಹ ಬೆಂಬಲ ಸೂಚಿಸಲಿದ್ದಾರೆ.ಹಾಗಾಗಿ ಕರ್ನಾಟಕ ಬಂದ್ ಒಂದೇ ಅಗತ್ಯವಿದ್ದು, ಇದಕ್ಕೆ ಸರಿಸುಮಾರು ಸಾವಿರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಅಧಿಕೃತವಾಗಿ ಬೆಂಬಲ ನೀಡಿವೆ ಎಂದು ಅವರು ತಿಳಿಸಿದರು.ಕನ್ನಡಪರ ಹೋರಾಟಗಾರ ಸಾರಾ ಗೋವಿಂದ್ ಮಾತನಾಡಿ, ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ. ಇದಕ್ಕೆ ಎಲ್ಲಾ ರೀತಿಯ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ನಾಳೆಯ ಬೆಂಗಳೂರು ಆಮ್ ಆದ್ಮಿ ಪಕ್ಷಕ್ಕೆ ಸೀಮಿತವಾಗಿದೆ. ಅಲ್ಲದೆ, ಅವರು ಈ ಹಿಂದೆ ಕನ್ನಡ,ನಾಡು,ನುಡಿ, ಜಲಕ್ಕೆ ನೀಡಿದ ಕೊಡುಗೆಗಳೇನು ಎಂದು ಪ್ರಶ್ನಿಸಿದರು.ರೈತನಾಯಕ ಬಡಗಲ್ ಪುರ ನಾಗೇಂದ್ರ ಮಾತನಾಡಿ, ಕರ್ನಾಟಕ ಬಂದ್ ಗೆ ನಮ್ಮ ಒಮ್ಮತಾ ಬೆಂಬಲ ಇದೆ. ಅಂದು ರೈತರ ನಾಯಕರು ಈ ಹೋರಾಟದಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸುವುದು ಮಾತ್ರವಲ್ಲದೆ, ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುತ್ತೇವೆ ಎಂದರು.ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಮಾತನಾಡಿ, ಕಾವೇರಿ ವಿಚಾರವಾಗಿ ಒಂದೇ ದಿನ, ಒಂದೇ ಬಂದ್ ಹೋರಾಟ ನಡೆಯಬೇಕು. ಅದೇ ಕಾರಣಕ್ಕಾಗಿ ಶುಕ್ರವಾರ ಅಖಂಡ ಕರ್ನಾಟಕದ ಬಂದು ಹೋರಾಟಕ್ಕೆ ಕರೆ ನೀಡಲಾಗಿದೆ. ಅಂದು ಸಾವಿರಾರು ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ನುಡಿದರು.ಸಭೆಯಲ್ಲಿ ನೂರಕ್ಕೂ ಅಧಿಕ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಸೆಪ್ಟೆಂಬರ್ ೨೯ರಂದು ಕರ್ನಾಟಕ ಬಂದ್ ಗೆ ಬೆಂಬಲಿಸುವುದಾಗಿ ಘೋಷಿಸಿದರು.

ಸೆಪ್ಟೆಂಬರ್ ೨೯ ಶುಕ್ರವಾರ ದಿನದಂದು ನಡೆಯುವ ಕರ್ನಾಟಕ ಬಂದ್ ವೇಳೆ ಆಸ್ಪತ್ರೆ ಔಷಧಿ ಮಳಿಗೆ, ಹಾಲು, ತುರ್ತು ಸೇವೆಗಳು ಹೊರತಪಡಿಸಿ ಎಲ್ಲವನ್ನು ಬಂದ್ ಮಾಡುತ್ತೇವೆ. ಜತೆಗೆ ಅಂದು ಇಡೀ ಕರ್ನಾಟಕ ಸಾರಿಗೆಯನ್ನು ಸ್ತಬ್ಧಗೊಳಿಸುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಶುಕ್ರವಾರ ಕರ್ನಾಟಕ ಬಂದ್ ಬೆಂಬಲಿಸಿ, ರಾಜಧಾನಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಆನಂತರ ಕಾವೇರಿ ನದಿ ನೀರು ಹರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಗುವುದು ಎಂದು ವಾಟಾಳ್ ಹೇಳಿದರು.