ಸೆ.೨೭ ರ ಬಂದ್ ಗೆ ಎಲ್ಲಾ ರೈತ ಸಂಘಟನೆಗಳ ಬೆಂಬಲ

ದಾವಣಗೆರೆ.ಸೆ.೨೩; ಸಂಯುಕ್ತ ಕಿಸಾನ್ ಮೊರ್ಚಾ, ರಾಜ್ಯ ರೈತ ಸಂಘ,ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ
ಇದೇ ಸೆ. 27 ರಂದು ನಡೆಯಲಿರುವ ಭಾರತ್  ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಬಂದ್ ಮಾಡಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಲಘುವಾಗಿ ಪರಿಗಣಿಸಿದೆ.ರೈತರು ಯಾವುದೇ ಕಾರಣಕ್ಕೂ ಸರ್ಕಾರದ ಕುತಂತ್ರಕ್ಕೆ ಬಗ್ಗುವುದಿಲ್ಲ.ಇದು ರೈತರ ಅಳಿವು ಉಳಿವಿನ ಹೋರಾಟವಾಗಿದೆ.ರೈತರಿಗೆ ಮಾರಕವಾಗಿರುವ  ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು , ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಯಾಗಬೇಕು , ವಿದ್ಯುತ್ ಖಾಸಗಿಕರಣ ನಿಲ್ಲಿಸಬೇಕು , ಕಬ್ಬಿನ ಎಫ್ ಆರ್ ಪಿ ಧರ ಪುನರ್ ಪರಿಶೀಲಿಸಬೇಕು ಜನಸಾಮಾನ್ಯರ ಅಡುಗೆ ಅನಿಲ ಡೀಸೆಲ್ , ಪೆಟ್ರೋಲ್ ದರ ಇಳಿಸಬೇಕು ಎಂದು ಒತ್ತಾಯಿಸಿ ಭಾರತ್ ಬಂದ್ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯ್ದೆ ಗಳನ್ನು ಜಾರಿಗೆ ತಂದು ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ತೆಕ್ಕೆಗೆ ನೀಡಲು ಮುಂದಾಗಿದೆ . ವಿದ್ಯುತ್ ಖಾಸಗೀಕರಣದ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ಮೀಟರ್ ಅಳವಡಿಸಲು ಯತ್ನಿಸುತ್ತಿದೆ , ರೈತರ ಅನುಕೂಲಕ್ಕೆ ಬೇಕಾದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಮಾಡುವಾಗ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಖಾತ್ರಿ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದರು ಕೇಂದ್ರ ಸರ್ಕಾರ ನಿರ್ಲಕ್ಷ ಧೋರಣೆ ತಾಳುತ್ತಿದೆ , ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ಎರಡು ವರ್ಷಗಳಿಂದ ಏರಿಕೆ ಮಾಡದೆ ಈಗ ಕ್ವಿಂಟಾಲ್ ಗೆ ಕೇವಲ ಐದು ರೂ ಏರಿಕೆ ಮಾಡಿ ರೈತರಿಗೆ ದ್ರೋಹ ಬಗೆದಿದೆ , ಎಲ್ಲ ವಿಚಾರಗಳ ಬಗ್ಗೆ ಕಳೆದ 10 ತಿಂಗಳಿಂದ ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ 10 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ ಈ ವೇಳೆ ೬೦೦ ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು , ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ . ಆದ್ದರಿಂದ ದೇಶದ ಎಲ್ಲಾ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ ಭಾರತ್ ಬಂದ್ ಗೆ ಕರೆ ನೀಡಿದ್ದಾರೆ ಅದನ್ನು ಬೆಂಬಲಿಸಿ ಕರ್ನಾಟಕದ ಎಲ್ಲಾ ರೈತ ಸಂಘಟನೆಗಳು ಜನಪರ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳು ಕಾರ್ಮಿಕ ಸಂಘಟನೆಗಳು ಕರ್ನಾಟಕೆ ಬಂದ್‌ಗೆ ಬೆಂಬಲಿಸಿ ಸಹಕರಿಸಬೇಕೆಂದು  ಮನವಿ ಮಾಡಿದರು.
ರೈತಮುಖಂಡ ತೇಜಸ್ವಿಪಟೇಲ್ ಮಾತನಾಡಿ
ದಾವಣಗೆರೆಯಲ್ಲಿ ಸೆ.೨೭ ರಂದು ಎತ್ತಿನಗಾಡಿಗಳ ಮೂಲಕ ಪ್ರತಿಭಟನೆ ಮಾಡಲಾಗುವುದು.ಗ್ರಾಮೀಣಭಾಗದಲ್ಲೂ ರೈತರು ಬೆಂಬಲ ನೀಡಲಿದ್ದಾರೆ.ಯಾವ ರೈತರು ಕೂಡ ಪ್ರಾಯೋಜಿತ ಪ್ರತಿಭಟನೆ ಮಾಡುವುದಿಲ್ಲ.ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಾರೆ. ಪ್ರಧಾನಿಗಳು ದೇಶ ವಿದೇಶಗಳ ಮುಖಂಡರು ಸೇರಿದಂತೆ ಎಲ್ಲರನ್ನೂ ಭೇಟಿ ಮಾಡುತ್ತಾರೆ ಆದರೆ ರೈತರನ್ನು ಭೇಟಿ ಮಾಡಲು ಅವರ ಬಳಿ ಸಮಯವಿಲ್ಲ ಎಂದರೆ ದುರಂತ.ಕಾಯ್ದೆಗಳ ಬಗ್ಗೆ ಜಿಲ್ಲಾಮಟ್ಟದಲ್ಲಿ ರೈತರೊಂದಿಗೆ ಸಭೆ ಸಂವಾದ ನಡೆಸಬೇಕು ಸಾಧಕ ಬಾಧಕಗಳನ್ನು ತಿಳಿಸಬೇಕು ಅದನ್ನು ಬಿಟ್ಟು ಏಕಾಏಕಿ ತೀರ್ಮಾನ ಸರಿಯಲ್ಲ‌ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರನಗೌಡ ಪಾಟೀಲ್, ಪತ್ರಿಹಳ್ಳಿ ದೇವರಾಜ್,ಹನುಮೇಗೌಡ,ಶಂಕರ್,ಅಂಜಿನಪ್ಪ ಪೂಜಾರ್ ಇದ್ದರು.Attachments area