ಸೆ.೨೬ ಬಗರ್‌ಹುಕುಂ ಸಾಗುವಳಿದಾರರ ಸಭೆ – ಮಾರೆಪ್ಪ ಹರವಿ

ರಾಯಚೂರು,ಸೆ.೨೨- ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರ ಸಭೆಯನ್ನು ನಗರದ ಚನ್ನಯ್ಯಭವನದಲ್ಲಿ ಸೆ.೨೬ ರಂದು ಮಧ್ಯಾಹ್ನ ೩ ಗಂಟೆ ಕರೆಯಲಾಗಿದೆ ಎಂದು ಭೂಮಿ ವಸತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಲುವ ವರ್ಷಗಳಿಮದ ರಾಜ್ಯದ ಭುಮಿ ಮತ್ತು ವಸತಿ ರಹಿತರ ಪರವಾದ ಧ್ವನಿಯಾಗಿ ಹೋರಾಡುತ್ತಿದ್ದು ಈ ನಿಟ್ಟಿನಲ್ಲಿ ಸಮಿತಿಯು ಹಲವು ಮೂಲಭೂತ ಬದಲಾವಣೆಗಾಗಿ ಸರ್ಕಾರಗಳ ಮೇಲೆ ಹಲವು ರೀತಿಯ ಒತ್ತಾಯಗಳನ್ನ ಮಾಡುತ್ತ ಬರುತ್ತಿದೆ.ಈ ನೆಲದ ಪ್ರತಿಯೊಂದು ಕುಟುಂಬಕ್ಕೆ ಗೌರವಯುತವಾಗಿ ಬದುಕಿ ಬಾಳಲು ಸ್ವಂತ ಮನೆ, ದುಡಿದು ಬದುಕಲು ಭೂಮಿ ದೊರೆಯಬೇಕೆಂಬುದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಸ್ವತಂತ್ರ ಸೇನಾನಿ ದಿ. ಎಚ್.ಎಸ್. ದೊರೈಸ್ವಾಮಿ ಪ್ರತಿಪಾದಿಸಿದಂತೆ ಭೂಮಿ- ವಸತಿಯು ಎಲ್ಲ ಜಾತಿಯ ಜನರ ಹಕ್ಕೂ ಆಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ಮೂರು ತಲೆಮಾರುಗಳಿಂದ ಸರ್ಕಾರಿ, ಗೋಮಾಳ, ಖರಾಬ್ ಇನ್ನಿತರೆ ಭೂಮಿಗಳನ್ನು ಹಸನುಗೊಳಿಸಿ ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಫಾರಂ ೫೦, ೫೩ ಹಾಗೂ ೫೭ ರಲ್ಲಿ ಅರ್ಜಿ ಭರ್ತಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದಾಗ್ಯೂ ಸಾಗುವಳಿ ಮಾಡುವ ಭೂರಹಿತ ರೈತರಿಗೆ ಭೂಮಿ ಮಂಜೂರು ಆಗುತ್ತಿಲ್ಲ. ಆದರೆ ಉಳ್ಳವರಿಗೆ ಭೂಮಿ ಕೊಡುವಾಗ ಇಲ್ಲದ ನೀತಿ ನಿಯಮ ನಿರ್ಬಂಧನೆಗಳು ಭೂ ರಹಿತರ ವಿಚಾರದಲ್ಲಿ ದುತ್ತನೆ ನಿಲ್ಲುತ್ತಿರುವುದರಿಂದ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಲು ಸಭೆಯನ್ನು ಕರೆಯಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಂಜನೇಯ ಕುರುಬದೊಡ್ಡಿ, ಷಣ್ಮುಖಪ್ಪ ಘಂಟಿ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.