ಸೆ.೨೬ ಕ್ಕೆ ರೈತರಿಂದ ವಿಧಾನಸೌಧ ಚಲೋ

ದಾವಣಗೆರೆ.ಸೆ.೧೬ : ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಖಾತರಿ ಬೆಂಬಲ ಬೆಲೆ ನಿಗದಿ, ವಿದ್ಯುತ್ ತಿದ್ದುಪಡಿ ಕಾಯಿದೆ ವಿರೋಧಿಸಿ ಇದೇ 26ರಂದು ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಬ್ಬು ಬೆಳೆಗಾರರು, ಕೃಷಿ ಪಂಪ್ ಸೆಟ್ ರೈತರ ಸಮಸ್ಯೆ, ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ನಿಗದಿಯಲ್ಲಿ ರೈತರಿಗೆ ದ್ರೋಹ ಬಗೆದಿರುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ, ದರ ಪುನರ್ ಪರಿಶೀಲನೆ ನಡೆಸಲು, 2022ರ ವಿದ್ಯುತ್ ಕಾಯ್ದೆ  ಖಾಸಗಿಕರಣ ತಿದ್ದುಪಡಿ ಕೈಬಿಡಬೇಕು ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್  ನಿಲ್ಲಿಸುವ ಹುನ್ನಾರ  ಕೈಬಿಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ರೈತ ಮುಖಂಡರು ಈ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಮೂರು ಕೃಷಿ  ಕಾಯ್ದೆಗಳನ್ನು ರದ್ದುಮಾಡಿ ಎಂ ಎಸ್ ಪಿ ಗ್ಯಾರೆಂಟಿ ಕಾನೂನು ಜಾರಿಗೆ ಆಗ್ರಹಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಮಾಡಲು ಸಮಿತಿ ರಚಿಸಿದ್ದು, ರೈತ ಮುಖಂಡರನ್ನು ಹೊರಗಿಟ್ಟು  ಸಮಿತಿ ರಚಿಸಿದ್ದಾರೆ. ಆದಕಾರಣ ದೇಶಾದ್ಯಂತ ರೈತ ಚಳುವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ದಕ್ಷಿಣ ಭಾರತದ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ  ರಾಷ್ಟ್ರೀಯ ರೈತ ಮುಖಂಡರ ಕಿಸಾನ್ ಅಧಿವೇಶನ 25 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಕೃಷಿ ಉತ್ಪನ್ನಗಳ ಹಾಗೂ ಉಪಕರಣಗಳ  ಮೇಲಿನ ಜಿ ಎಸ್ಟಿ ರದ್ದುಪಡಿಸಬೇಕು. ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹಾಗೂ ಕರೋನ ಲಾಕ್ಡೌನ್ ಅತಿವೃಷ್ಟಿ ಮಳೆ ಹಾನಿ   ಸಂಕಷ್ಟದಿಂದ ನಲುಗಿದ್ದಾರೆ. ಪರಿಹಾರ ನೀಡಬೇಕು. ದೇಶದ ಉದ್ಯಮಿಗಳ 10 ಲಕ್ಷ ಕೋಟಿ  ಸಾಲ ಮನ್ನಾ ಮಾಡಿದ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಅಂದಾಜು10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಳೆ ಹಾನಿಯಿಂದ  ರೈತರ ಬೆಳೆ ನಷ್ಟ ಆಗಿದೆ ಕೇಂದ್ರ ತಂಡ ನಾಟಕೀಯವಾಗಿ ನಾಮಕಾವಸ್ತೆ ಪರಿಶೀಲನೆ ನಡೆಸಿದ್ದಾರೆ ರೈತರ ಜಮೀನುಗಳಿಗೆ ನಷ್ಟ ಅಂದಾಜು ಮಾಡಲು ವಿಫಲರಾಗಿದ್ದಾರೆ, ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಮಂತ್ರಿಗಳು ಅಧಿಕಾರಿಗಳು ಕಾಣೆಯಾಗಿದ್ದಾರೆ, ಇನ್ನಾದರೂ  ಕಂದಾಯ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆ ಹಾನಿ ಆಗಿರುವ ಹಳ್ಳಿಗಳಿಗೆ ಬೇಟಿ ನೀಡಿ ನೈಜ  ರೈತರ ಬೆಳೆ ನಷ್ಟ  ಸಮೀಕ್ಷೆ ನಡೆಸಿ ನಷ್ಟದ ಅಂದಾಜಿನ ಸಂಪೂರ್ಣ ಪರಿಹಾರ ನೀಡಲು ಮುಂದಾಗಬೇಕು, ರೈತರಿಗೆ  ಭಿಕ್ಷೆ ರೂಪದ ಪರಿಹಾರ ಬೇಡ ನೈಜ ನಷ್ಟ ಪರಿಹಾರ ನೀಡಬೇಕು, ಅವೈಜ್ಞಾನಿಕವಾಗಿ ಸಣ್ಣಪುಟ್ಟ ಮೊತ್ತದ ಚೆಕ್ ನೀಡಿದರೆ ತಾಸಿಲ್ದಾರ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಚೆಕ್  ಸುಡುವ  ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರಾಜ್ಯರೈತ ಸಂಘದ ಮುಖಂಡ ಬಲ್ಲೂರು ರವಿಕುಮಾರ್,  ಹನುಮೇಗೌಡ, ಸಿ.ಬಿ.ಶಂಕರ್  ಪ್ರಸಾದ್, ಕುಮಾರಸ್ವಾಮಿ, ಅಂಜನಪ್ಪ, ಸಾಮಾಜಿಕ ಜಾಲತಾಣ ಮುಖ್ಯಸ್ಥ   ಬರಡನಪುರ ನಾಗರಾಜ್ ಇತರರು ಇದ್ದರು.

Attachments area

ReplyReply to allForward