ಸೆ.೨೩ ಹಮಾಲಿ ಕಾರ್ಮಿಕರ ಮುಷ್ಕರ

ಕೋಲಾರ,ಸೆ,೧೭- ಲಾಕ್‌ಡೌನ್ ಸಮಯದಲ್ಲಿ ಎಪಿಎಂಸಿ, ಮಿಲ್ ಗೊಡೌನ್ ಹಾಗೂ ಬಜಾರ್ ಹಮಾಲಿ ಕಾರ್ಮಿಕರ ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಸೆ.೨೩ರಂದು ಮತ್ತು ೨೪ರಂದು ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಕೆ.ಮಹಾಂತೇಶ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಸರ್ಕಾರಗಳು ಬಂಡವಾಳಶಾಹಿಗಳ ನೆರವಿಗೆ ಬಂತು, ಆದರೆ ಬಡವರನ್ನು ಸಂಪೂರ್ಣವಾಗಿ ಕಡೆಗಣಣಿಸಿದೆ, ಇದರಿಂದ ಕಾರ್ಮಿಕರು, ಹಮಾಲಿಗಳು ಸಂಕಷ್ಟಕ್ಕೆ ಇಡಾಗಿದ್ದಾರೆ ಎಂದರು.
ಸೆ.೨೩ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಹಾಗೂ ಸೆ.೨೪ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸ್ಥಳೀಯವಾಗಿ ರಾಜ್ಯದ ಹಲವಾರು ಎಪಿಎಂಸಿಗಳಲ್ಲಿ ಮತ್ತು ನಗರ, ಗ್ರಾಮೀಣ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿರುವ ವಸತಿ ಯೋಜನೆಗಳನ್ನು ಜಾರಿಗೆ ತರಬೇಕು, ಹಮಾಲಿ ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸಬೇಕು, ಕೊವೀಡ್ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ೪ ಕೋಟಿ ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಹಮಾಲಿ ಕಾರ್ಮಿಕರಿಗೆ ಸ೭,೫೦೦ರೂ ಆರ್ಥಿಕ ನೆರವು ನೀಡಬೇಕು ಜತೆಗೆ ಆರು ತಿಂಗಳಿಗೆ ಅಗುವಷ್ಟು ಉಚಿತ ಪಡಿತರ ವಿತರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ಸ್ ಪಡೆಯಬೇಕು, ಗ್ರಾಮೀಣ ಪ್ರದೇಶದಿಂದ ನಗರ, ಪಟ್ಟಣ ಪ್ರದೇಶಕ್ಕೂ ನರೇಗಾ ಕೆಲಸಗಳನ್ನು ವಿಸ್ತರಿಸಬೇಕು, ಪ್ರಧಾನ ಮಂತ್ರಿ ಜೀವನ ಭೀಮಾ ಮತ್ತು ಸುರಕ್ಷ ವಿಮಾ ಯೋಜನೆಗಳಿಗೆ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಕಾರ್ಯ ಕೂಡಲೇ ಪ್ರಾರಂಭಿಸಬೇಕು, ನೊಂದಾಯಿತ ಕಾರ್ಮಿಕರಿಗೆ ಸಮರಣ ಪರಿಹಾರ ನೀಡಬೇಕು ಮತ್ತು ಯೋಜನೆಗೆ ಸೇರುವ ಕಾರ್ಮಿಕರ ವಯಸ್ಸಿನ ಮಿತಿ ೬೦ ವರ್ಷಕ್ಕೆ ವಿಸ್ತರಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರೆ ಮಾತನಾಡಿದರು. ಸಿಐಟಿಯು ಜಿಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಿಕೃಷ್ಣ, ಭೀಮರಾಜ್, ಬಾಬು,ಅಜೀಂಪಾಷ ಹಾಜರಿದ್ದರು.