ಸೆ.೨೨ ರಂದು ನಿರುದ್ಯೋಗಿ ಯುವಜನರ ರಾಜ್ಯಮಟ್ಟದ ಸಮಾವೇಶ

ರಾಯಚೂರು. ಸೆ.೧೮-ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ನೇಮಕಾತಿ ಅಕ್ರಮಗಳನ್ನು ತಡೆಗಟ್ಟಲು ಆಗ್ರಹಿಸಿ ನಿರುದ್ಯೋಗಿ ಯುವಜನರ ರಾಜ್ಯಮಟ್ಟದ ಸಮಾವೇಶ ಇದೇ ತಿಂಗಳ ೨೨ ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕುರಿತು ಪ್ರಕಟಣಾ ಪತ್ರವನ್ನು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ರಾಮಚಂದ್ರಪ್ಪ ಅವರು ನಗರದ ಕೇಂದ್ರೀಯ ಗ್ರಂಥಾಲಯದ ಅವರಣದಲ್ಲಿ ಬಿಡುಗಡೆ ಮಾಡಿದರು.
ದೇಶ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರಗಳು ಅವುಗಳ ಭರ್ತಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬದಲಿಗೆ ಯುವಕರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವ, ಯಾಮಾರಿಸುವ ಸಂಗತಿಗಳನ್ನು ಮುಂದು ಮಾಡಲಾಗುತ್ತಿದೆ ಎಂದರು. ನೇಮಕಾತಿ ಅಕ್ರಮಗಳು ದಿನ ನಿತ್ಯ ವರದಿಯಾಗುತ್ತಿವೆ. ಅರ್ಹರು ಪ್ರತಿಭಾವಂತರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.
ಜಾಗತಿಕರಣ, ಖಾಸಗೀಕರಣ, ಉದಾರಿಕರಣ ನೀತಿಗಳು ಜಾರಿಗೆ ಬಂದ ನಂತರ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ಹೆಸರಿನಲ್ಲಿ ಪುಡಿ ಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ಖಾಯಂ ಸ್ವರೂಪದ ಹುದ್ದೆಗಳನ್ನು ನಾಶ ಮಾಡಲಾಗುತ್ತಿದೆ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಖಾಯಂ ಆಧಾರದಲ್ಲಿ ಭರ್ತಿ ಮಾಡಬೇಕು,ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ, ಅಕ್ರಮವನ್ನು ತಡೆಗಟ್ಟಬೇಕು ಇನ್ನು ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಭವನದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವನ್ನು ಉದ್ಘಾಟಿಸಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕದ ನಿವೃತ್ತ ಲೋಕಾಯುಕ್ತರಾದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಲೇಖಕರಾದ ಮಂಗಳೂರು ವಿಜಯ ಅವರು ಭಾಗವಹಿಸುವರು. ಹೋರಾಟ ಸಮಿತಿ ಅಖಿಲ ಭಾರತ ಅಧ್ಯಕ್ಷರಾದ ಇ.ವಿ.ಪ್ರಕಾಶ್, ಎ.ಐ.ಡಿ.ವೈ.ಓ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಜಿ.ಎಸ್.ಕುಮಾರ್, ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಅವರು ಭಾಷಣಕಾರರಾಗಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಸಮಿತಿಯ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ವಹಿಸುವರು. ಪ್ರಾಸ್ತಾವಿಕವಾಗಿ ಅಧ್ಯಕ್ಷರಾದ ವಿಜಯ್ ಕುಮಾರ್ ಮಾತನಾಡುವರು.
ಈ ಸಮಾವೇಶದಲ್ಲಿ ಉದ್ಯೋಗಾಕಾಂಕ್ಷಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಜಿಲ್ಲಾ ಘಟಕದ ಪದಾಧಿಕಾರಿಗಳಾದ ವಿನೋದ್ ಕುಮಾರ್, ಯಲ್ಲಪ್ಪ, ಮೌನೇಶ್, ಬಾಬು, ಸಬ್ಜಲಿ ಮುಂತಾದವರು ಉಪಸ್ಥಿತರಿದ್ದರು.