ಸೆಲ್ಫಿ ಹುಚ್ಚಿಗೆ ಯುವಕ ಬಲಿ

ಬೆಂಗಳೂರು,ನ.೧೮-ಚಲಿಸುವ ರೈಲಿನ ಬಾಗಿಲಲ್ಲಿ ನಿಂತು ಬ್ಯಾಲೆನ್ಸ್ ಮಾಡುತ್ತಾ ಸೆಲ್ಫಿ ತೆಗೆದುಕೊಳ್ಳುವಾಗ ನದಿಗೆ ಬಿದ್ದು ನಗರದ ಯುವಕನೋರ್ವ ಮೃತಪಟ್ಟು ಶ್ರೀರಂಗಪಟ್ಟಣದಲ್ಲಿ ಶವ ಪತ್ತೆಯಾಗಿದೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಣ್ಣೆಚಕ್ಕನಹಳ್ಳಿಯ ಅಭಿಷೇಕ್ (೧೯) ಮೃತ ಯುವಕನಾಗಿದ್ದಾನೆ.
ಗಾಂಧಿನಗರದ ಸ್ಕೈ ಎವನ್ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ (ಹೆಲ್ಫರ್)ನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಕಳೆದ ನ.೬ರಂದು ರಾತ್ರಿ ಸ್ನೇಹಿತರ ಜೊತೆ ಮಂಡ್ಯಕ್ಕೆ ತೆರಳಲು ಮೆಜೆಸ್ಟಿಕ್‌ನಲ್ಲಿ ರೈಲು ಹತ್ತಿದ್ದರು. ರಾತ್ರಿ ಎರಡು ಗಂಟೆ ಸುಮಾರಿಗೆ ರೈಲಿನ ಬಾಗಿಲಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಭಿಷೇಕ್ ರೈಲಿನಿಂದ ಕಾಣೆಯಾಗಿದ್ದಾನೆ.
ಈ ವಿಚಾರ ತಿಳಿದ ಆತನ ಸ್ನೇಹಿತರು ಪಾಂಡವಪುರ ಬಳಿ ಒಂದಷ್ಟು ಹುಡುಕಾಟ ನಡೆಸಿದ್ದು ಎಲ್ಲಿಯೂ ಆತ ಪತ್ತೆಯಾಗಿರಲಿಲ್ಲ.
ಬಳಿಕ ಅಭಿಷೇಕ್ ಸಂಬಂಧಿಕರಿಗೆ ಸ್ನೇಹಿತರು ಮಾಹಿತಿ ನೀಡಿದ್ದು ಸಂಬಂಧಿಯಾಗಿದ್ದ ಮಂಜೇಗೌಡ ಅವರು ಅಭಿಷೇಕ್ ಕಾಣೆಯಾಗಿದ್ದಾನೆಂದು ಉಪ್ಪಾರಪೇಟೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು ಸ್ನೇಹಿತರನ್ನು ವಿಚಾರಿಸಿದಾಗ ರೈಲಿನಲ್ಲಿ ತೆರಳುತ್ತಿದ್ದ ಬಗ್ಗೆ ತಿಳಿದು ಬಂದಿದೆ.
ಮಂಡ್ಯ ಪೊಲೀಸರು ಮತ್ತು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ನಿರಂತರ ಹುಡುಕಾಟ ನಡೆಸಿದ್ದು, ಶ್ರೀರಂಗಪಟ್ಟಣದ ಬಳಿ ಇರುವ ನದಿಯಲ್ಲಿ ಅಭಿಷೇಕ್? ಮೃತದೇಹ ಪತ್ತೆಯಾಗಿದೆ.
ಮೃತ ಅಭಿಷೇಕ್ ಟ್ರೈನ್ ಕಂಬಿ ಹಿಡಿದು ಪೋಟೋ ತೆಗೆದುಕೊಳ್ಳುವಾಗ ಬ್ರಿಡ್ಜ್‌ಗೆ ಡಿಕ್ಕಿಯಾಗಿ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಂಡು ಜೀವ ಕಳೆದುಕೊಳ್ಳಬಾರದು ಎಂದು ಅವರಲ್ಲಿ ಮನವಿ ಮಾಡಿದ್ದಾರೆ.