
ಕಲಬುರಗಿ,ಜು.22: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಸೆರ್ಸಾ ಲ್ಯಾಪಿಡಾ (Cersa Lapida) ಹುಳು ಕಡಿದರೆ ಮನುಷ್ಯ ಸಾವನ್ನಪ್ಪುತ್ತಾನೆ ಎಂಬ ಧ್ವನಿ ಸಂದೇಶದ ಜೊತೆಗೆ ಸದರಿ ಹುಳುವಿನ ಫೆÇೀಟೊ ಹರಿದಾಡುತ್ತಿದ್ದು, ಇದು ಶುದ್ಧ ಸುಳ್ಳಿನ ಸಂದೇಶವಾಗಿದೆ. ಸದರಿ ಹುಳು ಕಡಿತದಿಂದ ಮನುಷ್ಯ ಸಾವನ್ನಪ್ಪುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ.
ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿರುವ ಹುಳುವಿನ ವೈಜ್ಞಾನಿಕ ಹೆಸರು ಸೆರ್ಸಾ ಲ್ಯಾಪಿಡಾ (Cersa Lapida). ಇದು ಕೇವಲ ಒಂದು ಎಲೆ ತಿನ್ನುವ ಕೀಟ, ಸರ್ವೇ ಸಾಮಾನ್ಯವಾಗಿ ಔಡಲ ಹಾಗೂ ಸೂರ್ಯಕಾಂತಿ ಬೆಳೆಗಳಲ್ಲಿ ಬಹಳ ವಿರಳವಾಗಿ ಕಂಡುಬರುತ್ತದೆ. ಇನ್ನು ಈ ಹುಳು ಎಲೆ ತಿಂದಾಗ ಹಸಿರು ಬಣ್ಣದಾಗಿರುತ್ತದೆ, ಹೂ ತಿಂದಾಗ ಹಳದಿ ಬಣ್ಣಕ್ಕೆ ಹಾಗೂ ಕಾಯಿ ತಿಂದಾಗ ಕಪ್ಪು ಬಣ್ಣಕ್ಕೆ ಸಹಜವಾಗಿ ತಿರುಗುತ್ತದೆ ಎಂಬಿತ್ಯಾದಿ ಸತ್ಯಕ್ಕೆ ದೂರವಾದ ತಪ್ಪು ಮಾಹಿತಿಯು ವಾಟ್ಸಾಪ್ ಗ್ರೂಪ್‍ನಲ್ಲಿ ಹರಿದಾಡುತ್ತಿದೆ.
ವಾಸ್ತವವಾಗಿ ಈ ಹುಳು ಮನುಷ್ಯನಿಗೆ ಕಡಿಯಲು ಬರುವುದಿಲ್ಲ. ಬೇರೆ ಹುಳುಗಳಂತೆ ಇದೊಂದು ಕಂಬಳಿ ಹುಳು. ಇದರಿಂದ ಮನುಷ್ಯನಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾರಣ ರೈತ ಭಾಂದವರು ಇಂಥ ಸುಳ್ಳು, ಸುದ್ದಿಗಳಿಗೆ ಕಿವಿಗೊಡದೆ ಕಳೆದ 4-5 ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಮದ್ ಪಟೇಲ್ ಅವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.