ಸೆರೆ ಸಿಕ್ಕ ಮುಸಿಯಾ; ಅರಣ್ಯಕ್ಕೆ ರವಾನೆ

ಹೊನ್ನಾಳಿ,ಮೇ.5: ಪಟ್ಟಣದ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಪಟಳ ನೀಡುತ್ತಿದ್ದ ಗಂಡು ಮುಸಿಯಾವನ್ನು  ಪುರಸಭೆ, ಅರಣ್ಯ ಇಲಾಖೆ ಹಾಗೂ ಶಿವಮೊಗ್ಗದ ವನ್ಯಜೀವಿಗಳ ತಂಡದವರು ಜಂಟಿ ಕಾರ್ಯಾಚರಣೆ ನಡೆಸಿ ನೀಲಕಂಠೇಶ್ವರ ದೇವಸ್ಥಾನದ ಬಳಿ ಸೆರೆಹಿಡಿದಿದ್ದಾರೆ.ಕಳೆದ 15 ದಿನಗಳಿಂದ ಸುಮಾರು 30ಕ್ಕೂ ಹೆಚ್ಚು ಜನರಿಗೆ ಈ ಮುಸಿಯಾ ಗಾಯಗೊಳಿಸಿತ್ತು. ಕಳೆದ ವರ್ಷ ಒಂದು ಮುಸಿಯಾ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ 15 ರವರೆಗೆ ಸುಮಾರು 100ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಆಸ್ಪತ್ರೆಯ ಬಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಪುರಸಭಾ ಅಧ್ಯಕ್ಷ ಕೆ.ವಿ.ಶ್ರೀಧರ್ ಅವರನ್ನು ಅಟ್ಟಿಸಿಕೊಂಡು ಕಚ್ಚಲು ಹೋಗಿತ್ತು ಅದೃಷ್ಟವಶಾತ್ ಅವರು ತಕ್ಷಣವೇ ಸರ್ಕಾರಿ ಆಸ್ಪತ್ರೆಯ ಒಳಗೆ ಓಡಿ ಹೋಗಿ ಪಾರಾಗಿದ್ದರು. ಸತತ ಮೂರು ತಿಂಗಳ ಪ್ರಯತ್ನದ ಬಳಿಕ ಡಿಸೆಂಬರ್ 16ರಂದು ಮುಸಿಯಾವನ್ನು ಸೆರೆ ಹಿಡಿದು ಶಿವಮೊಗ್ಗದ ಬಳಿಯಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಕಳುಹಿಸಿಕೊಡಲಾಗಿತ್ತು. ಪುರಸಭಾ ಅಧ್ಯಕ್ಷ ಕೆ.ವಿ.ಶ್ರೀಧರ್ ಮಾತನಾಡಿ ಕಳೆದ ವರ್ಷವೇ ಮುಸಿಯಾದ ಭಯದಿಂದ ಬೇಸತ್ತಿದ್ದ ಪಟ್ಟಣದ ಜನತೆ ಮತ್ತೊಂದು ಮುಸಿಯಾವೊಂದು ಜನನಿಬಿಡ ಪ್ರದೇಶಗಳಲ್ಲೆಲ್ಲಾ ದಾಳಿ ಮಾಡುತ್ತಿದ್ದುದ್ದಕ್ಕೆ ಭಯಭೀತರಾಗಿ ಹಲವಾರು ಬಾರಿ ನನಗೆ ಮತ್ತು ಎಲ್ಲಾ ಸದಸ್ಯರಿಗೆ ಮತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಗಮನಕ್ಕೆ ತಂದಿದ್ದರು.  ಶಿವಮೊಗ್ಗದ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ನಿನ್ನೆ ರಾತ್ರಿ ಕರೆ ಮಾಡಿ ತಜ್ಞರ ತಂಡವನ್ನು ಮುಸಿಯಾ ಕಾರ್ಯಾಚರಣೆಗೆ ಕಳುಹಿಸಿಕೊಡುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಪುರಸಭೆಯ ಎಲ್ಲಾ ಸದಸ್ಯರ ಸಹಕಾರ ಪಡೆದು ಇಂದು ಶಿವಮೊಗ್ಗದ ವನ್ಯಜೀವಿ ವಿಭಾಗದ ಅರವಳಿಕೆ ತಜ್ಞರ ತಂಡದವರು, ಪುರಸಭಾ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸತತ 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮುಸಿಯಾಗೆ ಅರವಳಿಕೆ ಮದ್ದು ನೀಡಿ ನೀಲಕಂಠೇಶ್ವರ ದೇವಾಲಯದ ಬಳಿ ಸೆರೆ ಹಿಡಿದು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮಕ್ಕೆ ಕೊಂಡೊಯ್ದರು ಎಂದು ಮಾಹಿತಿ ನೀಡಿದರು.ವಲಯ ಅರಣ್ಯಾಧಿಕಾರಿ ಎಸ್.ಕೆ. ದೇವರಾಜ್ ಮಾತನಾಡಿ ಸಾರ್ವಜನಿಕರು ಪಟ್ಟಣದಲ್ಲಿನ ಕೋತಿಗಳಿಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಬಾರದು. ಆಹಾರ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಬೇಳೆಸಿಕೊಂಡ ಕೋತಿಗಳು ಪದೇ ಪದೇ ತಿನ್ನಲು ಬೇಡುತ್ತವೆ.ನೀಡದಿದ್ದಾಗ ನಿಮ್ಮಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸುತ್ತವೆ ಎಂದು ಮನವಿ ಮಾಡಿದ್ದಾರೆ.ಮುಸಿಯಾ ಕಾರ್ಯಾಚರಣೆಯಲ್ಲಿ ಪುರಸಭಾ ಕಿರಿಯ ಆರೋಗ್ಯ ನಿರೀಕ್ಷಕ ನಾಗೇಶ್,ದಫೇದಾರ್ ಅಂಕಣ್ಣ, ಸಿಬ್ಬಂದಿ ರವಿ,ರಾಜು,ಅಪ್ಪು, ಶಿವಮೊಗ್ಗದ ವನ್ಯಜೀವಿ ತಜ್ಞರಾದ ಡಾ.ವಿನಯ್,ಡಾ.ನಿಖಿತಾ,ಡಾ.ಸುಜಯ್,ಪ್ರಭಾರಿ ಉಪವಲಯ ಅರಣ್ಯಾಧಿಕಾರಿ ಎಚ್.ಬಿ.ಅಂಜಲಿ,ಅರಣ್ಯ ರಕ್ಷಕರಾದ ಪ್ರಭಾಕರ,ಆಶಾ,ಚಾಂದ್,ಸಿಬ್ಬಂದಿ ಎಂ.ಆರ್.ಚಂದ್ರಪ್ಪ,ಬಸವರಾಜ್ ಗಾಳಿ,ಚನ್ನೇಶಪ್ಪ,ಕತ್ತಿಗೆ ಲೋಕೇಶಪ್ಪ,ಕತ್ತಿಗೆ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.