ಸೆಪ್ಟೆಂಬರ್ ನಲ್ಲಿ ಶರಣ ಸಂಸ್ಕೃತಿ ಉತ್ಸವ

ಚಿತ್ರದುರ್ಗ ಆ.4 – ನಗರದ ಐತಿಹಾಸಿಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷದಂತೆ ಈ ವರ್ಷ ಶರಣಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳುವ ಕುರಿತು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸೆ. 28 ರಿಂದ ಮೂರುದಿನಗಳ ಕಾಲ ವಿವಿಧ ಸ್ಪರ್ಧೆಗಳು, ಅಕ್ಟೋಬರ್ 5ನೇ ತಾರೀಖು ಜಾನಪದ ಕಲಾಮೇಳ ಮತ್ತು ಶರಣಸಂಸ್ಕೃತಿ ಉತ್ಸವ, 6ನೇ ತಾರೀಕು ಶೂನ್ಯಪೀಠಾರೋಹಣ, ಕೃಷಿಮೇಳದಲ್ಲಿ ಕೈಗಾರಿಕೆ ಮತ್ತು ವಸ್ತುಪ್ರದರ್ಶನ ಹಾಗೂ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದರು.ಉತ್ಸವದ ಗೌರವಾಧ್ಯಕ್ಷರಾದ ಶ್ರೀ ಬಸವಕುಮಾರ ಸ್ವಾಮಿಗಳು ಮಾತನಾಡಿ, ವರ್ಷದಿಂದ ವರ್ಷಕ್ಕೆ ಪೂಜ್ಯರ ಆಲೋಚನೆಗಳು ವಿಸ್ತಾರವನ್ನು ಪಡೆದಿವೆ. ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಶ್ರೀಗಳು ಮಾಡುತ್ತಿದ್ದಾರೆ. ಶ್ರೀಮಠವು ಎಲ್ಲ ಸಮುದಾಯದವರ ಮಠವಾಗಿದೆ. ಈ ಬಾರಿಯ ಶರಣಸಂಸ್ಕೃತಿ ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ಶ್ರಮಿಸಲಾಗುವುದು ಎಂದರು.ವಕೀಲರಾದ ಫಾತ್ಯರಾಜನ್ ಮಾತನಾಡಿ, ವೇಟ್‌ಲಿಫ್ಟಿಂಗ್ ಅಥವಾ ಬಾಡಿಬಿಲ್ಡಿಂಗ್ ಸ್ಪರ್ಧೆ ಆಯೋಜಿಸಬಹುದು ಎಂದು ಸಲಹೆ ನೀಡಿದರು.ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಎಸ್.ಲಿಂಗಮೂರ್ತಿ, ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಡಾ. ಶಾಂತವೀರ ಸ್ವಾಮಿಗಳು, ಶ್ರೀ ಬಸವಮಾಚಿದೇವ ಸ್ವಾಮಿಗಳು ಸೇರಿದಂತೆ ಹರಗುರು ಚರಮೂರ್ತಿಗಳು ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಜಿತೇಂದ್ರ ಎನ್.ಹುಲಿಕುಂಟೆ ಸ್ವಾಗತಿಸಿದರು. ವೀರೇಂದ್ರಕುಮಾರ್ ನಿರೂಪಿಸಿದರು.