ಸೆಪ್ಟೆಂಬರ್ ತಿಂಗಳೊಳಗೆ ಲಸಿಕೆ ನೀಡಲು ಕರವೇ ಪ್ರತಿಭಟನೆ

ರಾಯಚೂರು, ಜೂ ೧೦- ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಸೆಪ್ಟೆಂಬರ್ ತಿಂಗಳೊಳಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಿ, ಮೂರನೇ ಕೋವಿಡ್ ಅಲೆಯಿಂದ ರಾಜ್ಯವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಎಲ್ಲ ನಾಗರಿಕರಿಗೂ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಉಚಿತವಾಗಿಯೇ ಲಸಿಕೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣಕ್ಕೆ ಸಿಗುವ ಲಸಿಕೆಯಿಂದಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿಯೇ ಲಸಿಕೆ ನೀಡಬೇಕು. ಹಲವಾರು ದೇಶಗಳಲ್ಲಿ ಯಾವ ರೀತಿ ಒಂದೇ ಒಂದು ಲಸಿಕೆಯನ್ನು ಮಾರಾಟಕ್ಕೆ ಇಟ್ಟಿಲ್ಲವೋ ಹಾಗೆಯೇ ಭಾರತದಲ್ಲೂ ಸಹ ಲಸಿಕೆ ಮಾರಾಟದ ವಿಷಯವಾಗಬಾರದು. ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ನೀಡಿರುವ ಶೇ ೨೫ ರಷ್ಟು ವ್ಯಾಕ್ಸಿನ್ ಕೊಳ್ಳುವ ಅವಕಾಶವನ್ನು ರದ್ದುಗೊಳಿಸಿ, ನೂರಕ್ಕೆ ನೂರು ಲಸಿಕೆಗಳು ಉಚಿತವಾಗಿಯೇ, ಸರ್ಕಾರದಿಂದಲೇ ನೀಡಬೇಕೆಂದು ಒತ್ತಾಯಿಸಿದರು.
ಕೋವಿಡ್ ಮೂರನೇ ಅಲೆ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಲಸಿಕೆಗಳನ್ನು ಕರ್ನಾಟಕದ ಸಮಸ್ತ ಜನತೆಗೆ ನೀಡಬೇಕು. ಜೂನ್ ಅಂತ್ಯದೊಳಗೆ ಮೊದಲನೇ ಡೋಸ್ ನೀಡಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ನೀಡಿ, ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಬೇಕು. ಲಸಿಕೆ ಇಲ್ಲದೆ ಜನರು ಸಾಯುವಂಥ ಸ್ಥಿತಿಯನ್ನು ನಿರ್ಮಾಣ ಮಾಡಬಾರದು.
ಸರ್ಕಾರ ಕೂಡಲೇ ಚುನಾವಣೆ ಸಂದರ್ಭದ ಮತದಾನ ಬೂತ್ ಗಳ ಮಾದರಿಯಲ್ಲಿ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಬೇಕು. ನೂಕುನುಗ್ಗಲು, ಜನದಟ್ಟಣೆ ಆಗದಂತೆ ಎಲ್ಲ ನಾಗರಿಕರು ಸುಲಭವಾಗಿ ವ್ಯಾಕ್ಸಿನ್ ಪಡೆಯುವಂಥ ಸ್ಥಿತಿ ನಿರ್ಮಾಣ ಮಾಡಬೇಕು. ಸಾಧ್ಯವಾದರೆ ಮನೆಮನೆಗೂ ತೆರಳಿ ಲಸಿಕೆ ನೀಡುವಂಥ ವ್ಯವಸ್ಥೆ ಜಾರಿಗೊಳಿಸಬೇಕು. ಲಸಿಕೆ ನೀಡಿಕೆಗೆ ಸರ್ಕಾರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಸ್ಮಾರ್ಟ್ ಫೋನ್ ಇಲ್ಲದ, ರಿಜಿಸ್ಟ್ರೇಷನ್ ಮಾಡಿಸಲು ಗೊತ್ತಾಗದ ಹಳ್ಳಿಗಾಡಿನ ಜನರ ಸಮಸ್ಯೆ ನೀಗಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟ ಸರ್ಕಾರ ಮೊದಲ ಹಂತದ ಲಸಿಕೆ ಹಂಚಿಕೆಗಳಲ್ಲಿ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಹಂಚಿಕೆ ಮಾಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಿರುವುದು ಅಂಕಿಅಂಶಗಳಲ್ಲಿ ಬಯಲಾಗಿದೆ. ಒಕ್ಕೂಟ ಸರ್ಕಾರ ಆಕ್ಸಿಜನ್, ವೆಂಟಿಲೇಟರ್, ರೆಮ್ಡಿಸಿವಿರ್, ಆಂಫೋಟೆರಿಸಿನ್ ಬಿ ಇತ್ಯಾದಿಗಳ ಹಂಚಿಕೆ ಸಂದರ್ಭದಲ್ಲೂ ಕರ್ನಾಟಕದ ಪಾಲನ್ನು ಕಡಿಮೆ ಮಾಡಿ, ಗುಜರಾತ್ ಮತ್ತು ಉತ್ತರದ ರಾಜ್ಯಗಳಿಗೆ ಹೆಚ್ಚು ನೀಡಿದೆ. ಈ ತಾರತಮ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೂನ್ ೨೧ ರಿಂದ ಒಕ್ಕೂಟ ಸರ್ಕಾರ ನೀಡುವ ಲಸಿಕೆಗಳು ವೈಜ್ಞಾನಿಕವಾಗಿ, ಜನಸಂಖ್ಯೆ ಆಧರಿಸಿ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ
ಜಿಲ್ಲಾಧ್ಯಕ್ಷ ವಿನೋದ್ ರೆಡ್ಡಿ ಎಂ, ಎಂ.ಡಿ.ಸಾದಿಕ್, ಸಿ.ಹೊನ್ನಪ್ಪ, ಜಿ.ಮುನಿರೆಡ್ಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.