ಸೆಪ್ಟೆಂಬರ್‌ನಲ್ಲಿ ಮಕ್ಕಳಿಗೆ ಲಸಿಕೆ

ನವದೆಹಲಿ,ಜೂ.೨೩- ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಗಳು ಆಗಬಹುದು ಎಂಬ ತಜ್ಞರ ಎಚ್ಚರಿಕೆಗಳು ಆತಂಕ ಉಂಟು ಮಾಡಿರುವ ನಡುವೆಯೇ ಮಕ್ಕಳಿಗೆ ಶೀಘ್ರ ಲಸಿಕೆ ಲಭ್ಯವಾಗುವ ಸಿಹಿ ಸುದ್ದಿ ಹೊರ ಬಿದ್ದಿದೆ. ಬರುವ ಸೆಪ್ಟೆಂಬರ್ ವೇಳೆಗೆ ೨ ವರ್ಷ ಮೇಲ್ಟಟ್ಟ ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ಸಿಗಲಿದೆ.
ಸ್ವದೇಶಿ ಔಷಧ ತಯಾರಿಕಾ ಸಂಸ್ಥೆಯಾದ ಭಾರತ್ ಬಯೋಟೆಕ್ ಕೊರೊನಾಗೆ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್ ಲಸಿಕೆಯನ್ನು ಮಕ್ಕಳಿಗೂ ನೀಡುವ ಬಗ್ಗೆ ಏಮ್ಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್‌ನಲ್ಲಿ ಕೊವಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಗಲಿದೆ.
ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್)ನ ನಿರ್ದೇಶಕ ಹಾಗೂ ಕೇಂದ್ರ ಸರ್ಕಾರದ ಕೋವಿಡ್-೧೯ ಕಾರ್ಯಪಡೆಯ ಸದಸ್ಯರೂ ಆಗಿರುವ ಡಾ. ರಣದೀಪ್ ಗುಲೇರಿಯಾ ಅವರು ಸೆಪ್ಟೆಂಬರ್‌ನಲ್ಲಿ ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ನೀಡಲು ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಭಾರತ್ ಬಯೋಟೆಕ್ ಕೊವಾಕ್ಸಿನ್ ಲಸಿಕೆಯನ್ನು ನೀಡುವ ಬಗ್ಗೆ ೨ ಮತ್ತು ೩ನೇ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಈ ಪರೀಕ್ಷೆಯ ವರದಿಗಳು ಸೆಪ್ಟೆಂಬರ್‌ನಲ್ಲಿ ಹೊರ ಬರಲಿದೆ. ಅದೇ ತಿಂಗಳು ಮಕ್ಕಳಿಗೆ ಕೊವಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ಪಡೆದು ಲಸಿಕೆ ನೀಡಿಕೆ ಆರಂಭಿಸಲಾಗುವುದು ಎಂದರು.
೨ ವರ್ಷ ಮೇಲ್ಪಟ್ಟ ೧೮ ವರ್ಷ ಒಳಗಿನವರಿಗೆ ಕೊವಾಕ್ಸಿನ್ ಲಸಿಕೆ ನೀಡುವ ಸಂಬಂಧ ಪ್ರಾಯೋಗಿಕ ಪರೀಕ್ಷೆಗಳನ್ನು ಆರಂಭಿಸಲು ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ ಕಳೆದ ಮೇ ೧೨ ರಂದು ಭಾರತ್ ಬಯೋಟೆಕ್ ಸಂಸ್ಥೆಗೆ ಒಪ್ಪಿಗೆ ನೀಡಿತ್ತು. ಅದರಂತೆ ಜೂ. ೭ ರಿಂದ ನವದೆಹಲಿಯ ಏಮ್ಸ್‌ನಲ್ಲಿ ೨ ರಿಂದ ೧೭ ವರ್ಷದ ಮಕ್ಕಳ ಮೇಲೆ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದ್ದು, ಈ ಪರೀಕ್ಷೆಗಳಲ್ಲಿ ಮಕ್ಕಳಲ್ಲೂ ಪ್ರತಿಕಾಯ ಶಕ್ತಿ ವೃದ್ಧಿಯಾಗಿರುವುದನ್ನು ಕಂಡುಕೊಳ್ಳಲಾಗಿದೆ. ಪೂರ್ಣ ಪ್ರಮಾಣದ ಪ್ರಾಯೋಗಿಕ ವರದಿಗಳು ಲಭ್ಯವಾಗಿ ದತ್ತಾಂಶಗಳನ್ನು ಸಲ್ಲಿಸಿದ ನಂತರ ಲಸಿಕೆಯನ್ನು ಬಳಸಲು ಐಸಿಎಂಆರ್ ಅನುಮೋದನೆ ನೀಡಲಿದೆ.
ಫೈಜರ್ ಬಯೋ ಎನ್‌ಟೆಕ್‌ನ ಲಸಿಕೆಗೂ ಭಾರತದಲ್ಲಿ ಒಪ್ಪಿಗೆ ಸಿಕ್ಕರೆ ಅದೂ ಸಹ ಮಕ್ಕಳಿಗೆ ನೀಡಲು ಆಯ್ಕೆಯಾಗಬಹುದು ಎಂದು ಡಾ. ಗುಲೇರಿಯಾ ಹೇಳಿದರು.

ಮಕ್ಕಳಿಗೆ ಸೆಪ್ಟೆಂಬರ್‌ನಲ್ಲಿ ಲಸಿಕೆ ಲಭ್ಯ.

೨ ವರ್ಷ ಮೇಲ್ಪಟ್ಟ iಕ್ಕಳಿಗೆ ಕೊವಾಕ್ಸಿನ್ ಲಸಿಕೆ ನೀಡಿಕೆಗೆ ಕೇಂದ್ರದ ಒಪ್ಪಿಗೆ ಸಾಧ್ಯತೆ.

ದೆಹಲಿಯ ಏಮ್ಸ್‌ನಲ್ಲಿ ೨-೩ ಹಂತದ ಪ್ರಾಯೋಗಿಕ ಪರೀಕ್ಷೆ ಪ್ರಗತಿ.

ಮಕ್ಕಳಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದು ಪ್ರಾಯೋಗಿಕವಾಗಿ ಸಾಬೀತು.

ಸೆಪ್ಟೆಂಬರ್‌ನಲ್ಲಿ ಕೇಂದ್ರದ ಅನುಮತಿ-ಲಸಿಕೆ ನೀಡಿಕೆ ಆರಂಭ.

ಮಕ್ಕಳಿಗೆ ಕೊರೊನಾ ಲಸಿಕೆ ನೀಡಿಕೆ ಸಂಬಂಧ ನಡೆದಿರುವ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡ ನಂತರ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಮಕ್ಕಳಿಗೆ ಲಸಿಕೆ ನೀಡಿಕೆ ಸಂಬಂಧ ಸದ್ಯ ಕ್ಲಿನಿಕಲ್ ಟ್ರಯಲ್ ನಡೆದಿದೆ. ಕ್ಲಿನಿಕಲ್ ಟ್ರಯಲ್ ಮುಗಿದ ಕೂಡಲೇ ಲಸಿಕೆ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.