ಸೆಟ್ ಬಾಕ್ಸ್ ವಿತರಣೆ ಆರೋಪ: ಮುನಿರತ್ನ ಅನರ್ಹಕ್ಕೆ ಡಿಕೆಶಿ ಆಗ್ರಹ


ಬೆಂಗಳೂರು, ನ- 2 ಸಾವಿರಾರು ಸೆಟ್ ಬಾಕ್ಸ್ ಗಳನ್ನು ವಿತರಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಅನರ್ಹ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ನಾಳೆ ಆರ್.ಆರ್ ನಗರ ಉಪ ಸಮರಕ್ಕೆ ಮತದಾನ ನಡೆಯುತ್ತಿದೆ. ಇದರ ಬೆನ್ನಲ್ಲೇ ಮುನಿರತ್ನ ವಿರುದ್ದ ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ.ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರಸ್ ನಡುವಣ ಆರೋಪ ಮತ್ತಷ್ಟು ಬಿರುಸುಗೊಂಡಂತಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್. ಆರ್. ನಗರದಲ್ಲಿ 35,O00 ಸೆಟ್ ಬಾಕ್ಸ್‌ ಉಚಿತವಾಗಿ ಹಂಚಿದ್ದಾರೆ. ಈ ವಿಷಯವನ್ನು ಖುದ್ದು ಮುನಿರತ್ನ ಅವರೆ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಮುನಿರತ್ನ ಅವರನ್ನು ಅನರ್ಹಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಆರ್ ಆರ್ ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ ಎಂದು ಡಿ.ಕೆ.ಶಿ ಆರೋಪಿಸಿದ್ದಾರೆ.
ಖಾಲಿ ಮನೆ, ಖಾಲಿ ಸೈಟ್ ತೋರಿಸಿ ಹೆಸರು ಸೇರ್ಪಡೆಯಾಗಿದೆ. ಒಟ್ಟು 40 ಸಾವಿರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ. ಒಂದು ಮನೆಯಲ್ಲಿ ಇಬ್ಬರು ಮತದಾರರು ಇದ್ದರೆ, ನಾಲ್ಕು, ಐದು ಜನರ ಹೆಸರನ್ನು ಸೇರಿಸಿದ್ದಾರೆ. ಆಂಧ್ರ, ಚಿತ್ತೂರು, ತಮಿಳುನಾಡು ಅಲ್ಲಿಂದ ಕರೆದುಕೊಂಡು ಬಂದು ಮತ ಹಾಕಿಸುತ್ತಾರೆ. ಡೋಬಿ ಘಾಟ್ ಮನೆಯೊಂದರಲ್ಲಿ 56 ಹೆಸರು ಅಕ್ರಮವಾಗಿ ಸೇರಿಸಿದ್ದಾರೆ. ನಾವು ಸರ್ವೇ ಮಾಡಿದಾಗ ಈ ಮಾಹಿತಿ ಬಹಿರಂಗವಾಗಿದೆ. ಎಲ್ಲವನ್ನೂ ನಾವು ವಿಡಿಯೋ ರೆಕಾರ್ಡ್ ಮಾಡಿಸಿದ್ದೇವೆ ಎಂದು ಅವರು ವಿವರಿಸಿದರು.