ಸೆಕ್ಯೂರಿಟಿ ಗಾರ್ಡ್ ನಿಂದ ಕೀ ಪಡೆದು ಇನ್ನೋವಾ ಕಾರು ಕಳವು

ಬೆಂಗಳೂರು, ನ.೮-ವಾಹನ ನಿಲುಗಡೆಯ ಸೆಕ್ಯೂರಿಟಿ ಗಾರ್ಡ್ ನಿಂದ ಇನ್ನೋವಾ ಕ್ರಿಸ್ಟಾ ಕಾರಿನ ಕೀ ಪಡೆದು ನಂತರ ಕಾರು ಸಮೇತ ಕಳ್ಳರು ಪರಾರಿಯಾದ ಘಟನೆ ಅಶೋಕ್ ನಗರದಲ್ಲಿ ನಡೆದಿದೆ.
ಕಾರು ಕಳೆದುಕೊಂಡಿರುವ ಬನಶಂಕರಿ ೨ನೇ ಹಂತದ ಉದ್ಯಮಿ ಲಿಂಗರಾಜು (೨೬)ಅವರು ನೀಡಿರುವ ದೂರಿನ ಆಧಾರದ ಮೇಲೆ ಅಶೋಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಕಳೆದ ನ. ೫ ರಂದು ಲಿಂಗರಾಜು ತನ್ನ ಸ್ನೇಹಿತರೊಂದಿಗೆ ಮೆಗ್ರಾಥ್ ರಸ್ತೆಯಲ್ಲಿರುವ ಪಬ್‌ಗೆ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಊಟಕ್ಕೆ ಬಂದಿದ್ದು ಕಾರಿನ ಕೀ ಅನ್ನು ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿ ಕೈಗೆ ಕೊಟ್ಟು ತೆರಳಿದ್ದರು.
ಪಾರ್ಕಿಂಗ್ ಸಿಬ್ಬಂದಿ ಕಾರ್ ನಂಬರ್ ಅನ್ನು ಸಹ ನಮೂದಿಸಿ ರಸೀದಿ ನೀಡಿದ್ದು ಲಿಂಗರಾಜು ಕಾರಿನಲ್ಲಿ ಬಂದಿರುವುದನ್ನು ಗಮನಿಸಿದ ಕಳ್ಳರು, ಕಾರನ್ನು ಕದಿಯಲು ಸಂಚು ರೂಪಿಸಿದ್ದರು.
ಅದರಂತೆ ಪಬ್ ಒಳಗೆ ಕೆಲ ಸಮಯ ಕಳೆದ ಖದೀಮರು ಬಳಿಕ ನೇರವಾಗಿ ಪಾರ್ಕಿಂಗ್ ಸಿಬ್ಬಂದಿ ಬಳಿ ಬಂದು ನಾವು ಹೊರಟಿದ್ದೇವೆ. ಬೇಗ ಇನ್ನೋವಾ ಕ್ರಿಸ್ಟಾ ಕಾರಿನ ಕೀ ಕೊಡಿ ಎಂದು ಕೇಳಿದ್ದಾರೆ. ಪಾರ್ಕಿಂಗ್ ಸಿಬ್ಬಂದಿ ಕಾರಿನ ಕೀ ಕೊಟ್ಟು ಕಳುಹಿಸಿದ್ದಾರೆ. ಕೀ ಪಡೆದ ಕಳ್ಳರು ಸುಲಭವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.
ಇತ್ತ ಊಟ ಮುಗಿಸಿಕೊಂಡು ಕಾರು ನಿಲುಗಡೆ ಜಾಗಕ್ಕೆ ಬಂದ ಲಿಂಗರಾಜು, ಪಾರ್ಕಿಂಗ್ ಸಿಬ್ಬಂದಿ ಬಳಿ ಕಾರಿನ ಕೀ ಕೇಳಿದಾಗ ಕಾರು ಕಳ್ಳತನವಾಗಿರುವುದು ತಿಳಿದು ಬಂದಿದೆ.
ಪಬ್‌ನ ಪಾರ್ಕಿಂಗ್ ಸಿಬ್ಬಂದಿ ಮೇಲೆಯೇ ಲಿಂಗರಾಜು ಅನುಮಾನ ವ್ಯಕ್ತಪಡಿಸಿ, ದೂರು ದಾಖಲಿಸಿದ್ದಾರೆ.