ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ ಆಸ್ತಿಗಳ ಮಾರಾಟ ವಿರೋಧಿಸಿ ಕ್ರೈಸ್ತರಿಂದ ಪ್ರತಿಭಟನೆ

ಕಲಬುರಗಿ,ಜು.7:ನಗರದ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್‍ಗಳ ಆಸ್ತಿಗಳನ್ನು ಧರ್ಮ ಗುರುಗಳು ಮಾರಾಟ ಮಾಡಬಾರದು ಎಂದು ಒತ್ತಾಯಿಸಿ ಕ್ರೈಸ್ತ ಸಮಾಜದವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕ್ರೈಸ್ತ ಮಶಿನರಿಗಳು ಕ್ರೈಸ್ತರಿಗಾಗಿ ಶಿಕ್ಷಣ ಮತ್ತು ವೈದ್ಯಕೀಯ ಹಾಗೂ ವಸತಿ ಗೃಹಕ್ಕೋಸ್ಕರ ಮಾಡಿದ ಆಸ್ತಿಗಳಾಗಿವೆ. ಕ್ರೈಸ್ತ ಸಮಾಜಕ್ಕೋಸ್ಕರ ಇರುವ ಆಸ್ತಿಗಳನ್ನು ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.
ನಗರದ ವಿಜಯ್ ವಿದ್ಯಾಲಯ ಆಸ್ತಿ ಸರ್ವೆ ನಂಬರ್ 36,37 ಹಾಗೂ 47 ಸೇರಿ ಒಟ್ಟು 27 ಎಕರೆ 20 ಗುಂಟೆ, ನಗರದ ವಿಠಲ್ ನಗರದಲ್ಲಿರುವ ಶಾಂತಿ ಸದನದ ಆಸ್ತಿ ದದ್ದಾಪೂರ್ ಸರ್ವೆ ನಂಬರ್ 7ರಲ್ಲಿ ಆರು ಎಕರೆ, 5 ಗುಂಟೆ ಜಮೀನು ಇದೆ. ಇದು ಕ್ರೈಸ್ತರ ಆಸ್ತಿಯಾಗಿದೆ. ಆದಾಗ್ಯೂ, ಜಿಲ್ಲಾ ಮೇಲ್ವಿಚಾರಕರು, ಬಿಷಪ್ ಹಾಗೂ ಕೌನ್ಸಿಲ್ ಸದಸ್ಯರು ಸೇರಿ ಸದರಿ ಆಸ್ತಿಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದನ್ನು ಹೊರತುಪಡಿಸಿ ಹಣದ ಆಮಿಷಕ್ಕೆ ಒಳಗಾಗಿ ಆಸ್ತಿಯನ್ನು ಮಾರಾಟ ಮಾಡುವ ಮತ್ತು ಜಂಟಿ ಅಭಿವೃದ್ಧಿಗೆ ನೀಡುವ ಹಾಗೂ ಒಪ್ಪಂದ ಕರಾರು ಪತ್ರ ಮಾಡಿಕೊಡುವ ಉದ್ದೇಶವನ್ನು ಹೊಂದಿದ್ದಾರೆ. ಆದಾಗ್ಯೂ, ಇದು ಕಾನೂನುಬಾಹಿರವಾಗಿದೆ ಎಂದು ಅವರು ದೂರಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಕ್ರೈಸ್ತರನ್ನು ಸೇರಿಸಿ ಸರ್ಕಾರದ ಸೌಲತ್ತುಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ. ಆದಾಗ್ಯೂ, ಕ್ರೈಸ್ತ ಮಶಿನರಿಗಳು ಕ್ರೈಸ್ತರಿಗಾಗಿ ಆಯಾ ಜಿಲ್ಲೆಗಳಲ್ಲಿ ಆಸ್ತಿಗಳನ್ನು ಮಾಡಿಕೊಟ್ಟಿದ್ದಾರೆ. ಅದರಲ್ಲಿ ಶಾಂತಿ ಸದನ ಮತ್ತು ವಿಜಯ್ ವಿದ್ಯಾಲಯ ಜಿಲ್ಲೆಯಲ್ಲಿ ಕ್ರೈಸ್ತರಿಗಾಗಿ ಆಸ್ತಿ ಮಾಡಿದ್ದಾರೆ. ಶಾಂತಿ ಸದನದ ಆಸ್ತಿಯಲ್ಲಿ ಕ್ರೈಸ್ತರ ಹೆಣ್ಣು ಮಕ್ಕಳಿಗೆ ವಿಶೇಷವಾದ ವಸತಿ ಗೃಹ ಮತ್ತು ಶಾಲೆಯನ್ನು ಮಾಡುವ ಉದ್ದೇಶ ಹೊಂದಲಾಗಿದೆ. ಆದ್ದರಿಂದ ಶಾಂತಿ ಸದನದಲ್ಲಿ ಮಹಿಳಾ ವಸತಿ ಗೃಹ ಸ್ಥಾಪಿಸಲಾಗಿದೆ. ವಸತಿ ಗೃಹವು ನೂರಾರು ವರ್ಷ ಚಾಲ್ತಿಯಲ್ಲಿದೆ. ಆಸ್ತಿಯ ಮೇಲೆ ಕೆಲವು ದುಷ್ಕರ್ಮಿಗಳ ದೃಷ್ಟಿ ಬಿದ್ದು, ಮಾರಾಟ ಮಾಡುವುದಕ್ಕೆ ಅಥವಾ ಜಂಟಿ ಅಭಿವೃದ್ಧಿಗೆ ನೀಡಿ ಕೋಟಿಗಂಟಲೇ ಹಣ ಕಬಳಿಸಲು ಸಂಚು ಹೂಡಿರುತ್ತಾರೆ ಎಂದು ಅವರು ವಿರೋಧ ವ್ಯಕ್ತಪಡಿಸಿ, ಸದರಿ ಆಸ್ತಿಗೆ ಕ್ರೈಸ್ತರೇ ಫಲಾನುಭವಿಗಳು ಎಂದರು.
ಈಗಾಗಲೇ ಇರುವ ಪಟ್ಟಭದ್ರ ಅಧಿಕಾರಿ ಬಿಷಪ್ ಎನ್.ಎಲ್. ಕರ್ಕರೆ ಅವರು ಅಧಿಕಾರ ಸ್ವೀಕರಿಸಿ ಎಂಟು ವರ್ಷಗಳು ಕಳೆದರೂ ನಮ್ಮ ಭಾಗವಾದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಮುಂತಾದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅಲ್ಲದೇ ಸಂಸ್ಥೆಯ ಆಸ್ತಿಗಳಾದ ಬೆಂಗಳೂರು ಬಾಲ್ಡವಿನ್ ಆಸ್ತಿಯನ್ನು ಎತ್ತಿದ್ದಾರೆ. ಬೆಳಗಾವಿ, ಕೋಲಾರ್ ಮತ್ತು ಸುರಪುರ ತಾಲ್ಲೂಕಿನ ಚಾಮನಾಳ್ ಗ್ರಾಮದಲ್ಲಿನ ಆಸ್ತಿಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂ.ಗಳನ್ನು ಸಂಗ್ರಹಿಸಿದ್ದಾರೆ. ಆದಾಗ್ಯೂ, ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಅವರು ದೂರಿದರು.
ಕ್ರಿಶ್ಚಿಯನ್ ನಿಯಮಗಳ ಪ್ರಕಾರ 70 ವರ್ಷಕ್ಕೆ ನಿವೃತ್ತಿ ಹೊಂದಬೇಕಾದ ಬಿಷಪ್ ಎನ್.ಎಲ್. ಕರ್ಕರೆ ಅವರು 74 ವರ್ಷಗಳು ಕಳೆದರೂ ಸಹ ನಿವೃತ್ತಿ ಹೊಂದದೇ ಸಂಸ್ಥೆಯ ಆಸ್ತಿಗಳನ್ನು ಮಾರಾಟ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಅವರೊಂದಿಗೆ ಇನ್ನಿತರ ಸದಸ್ಯರುಗಳು ಹಣವನ್ನು ನೀಡಿ ತಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬೆಂಗಳೂರು ಪ್ರಾದೇಶಿಕ ಕಾನ್ಫೆರೆನ್ಸ್‍ನ ಖಜಾಂಚಿ ಜಾರ್ಜ್ ಮ್ಯಾಥಿವ್ ಅವರು ಬಿಷಪ್ ಕೌನ್ಸಿಲ್‍ಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ನ್ಯಾಯಾಲಯದಲ್ಲಿ ಪ್ರಕರಣ ಸಹ ಇದೆ. ನ್ಯಾಯಾಲಯವು ಬಿಷಪ್ ಕರ್ಕರೆ ವಿರುದ್ದ ತನಿಖೆ ಮಾಡಲು ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದರು.
ನ್ಯಾಯಾಲಯದ ಆದೇಶದ ಪ್ರಕಾರ ಕೌನ್ಸಿಲ್ ತನಿಖೆಯನ್ನು ನಡೆಸಲು ತನಿಖಾ ತಂಡವನ್ನು ರಚಿಸಿ, ತನಿಖೆಯನ್ನು ಮಾಡಲಾಗಿ ವರದಿಯ ಪ್ರಕಾರ ರೇ. ಡೇವಿಡ್ ನಥಾನಿಯಲ್ ಹಾಗೂ ಬಿಷಪ್ ಎನ್.ಎಲ್. ಕರ್ಕರೆ ಹಾಗೂ ಕಾರ್ಯದರ್ಶಿ ರೇ. ಡೇವಿಡ್ ನಥಾನಿಯಲ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಹಾಗೂ ಸಂಸ್ಥೆಯ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಎಂದು ತನಿಖಾ ತಂಡದ ವರದಿಯಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.
ಆದ್ದರಿಂದ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಬಿಷಪ್ ಎನ್.ಎಲ್. ಕರ್ಕರೆ ಹಾಗೂ ಡೆವಿಡ್ ನಥಾನಿಯಲ್ ಅವರು ತಪ್ಪಿತಸ್ಥರೆಂದು ಸಾಬೀತಾಗಿದ್ದರಿಂದ ಸಂಸ್ಥೆಯ ಕುರಿತಾದ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಅಶಕ್ತ ಹಾಗೂ ಅನರ್ಹರಾಗಿರುತ್ತಾರೆ. ಕಾರಣ ಕ್ರೈಸ್ತ ಸಮುದಾಯದ ಶಾಂತಿ ಸದನದ ಆಸ್ತಿಯನ್ನು ಮಾರಾಟ ಅಥವಾ ಜಂಟಿ ಅಭಿವೃದ್ಧಿ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಆಸ್ತಿಯ ಪಹಣಿ ಪತ್ರಿಕೆಯಲ್ಲಿ ನಮೂದು ಮಾಡಬೇಕು ಎಂದು ಕೋರಿದರು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಧರ್ಮ, ಧರ್ಮಗಳ ಮಧ್ಯೆ ಕಲಹ ಉಂಟಾಗುವ ಸಂಭವ ಇದೆ ಎಂದು ಅವರು ಎಚ್ಚರಿಸಿದರು.
ಸಿಮೆಯೋನ್ ಎಸ್. ತುಮಕೂರಕರ್, ಸತ್ಯವೀರ್ ಜೆ., ಅರುಣಮಿತ್ರ ತುಮಕೂರ್, ಸ್ಯಾಂಡಿರಾಜ್, ಸುನಂದ್ ಜುಕೂರ್, ರೋನಾಲ್ಡ್ ಎಸ್., ಸುದರ್ಶನ್, ರವಿಕಾಂತ್ ಡಿ., ವಿನೋದಕುಮಾರ್, ಯೇಸುನಾಥ್ ಯಡಹಳ್ಳಿ, ರಾಜು ಹಳ್ಳಿ, ಸುದೀರ್ ಎಸ್.ಕೆ., ಜೇಮ್ಸ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.