ಸೆಂಟ್ಯಾರು ವಾಸ್ತವ್ಯದ ಮನೆಗೆ ಮರಬಿದ್ದು ಅಪಾರ ನಷ್ಟ

ಪುತ್ತೂರು : ತೆಂಗಿನಮರವೊಂದು ಉರುಳಿ ಬಿದ್ದು ವಾಸ್ತವ್ಯದ ಮನೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಮತ್ತು ಮನೆಯ ಯಜಮಾನ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರು ಸಮೀಪದ ಕೂರೇಲು ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.


ಆರ್ಯಾಪು ಗ್ರಾಮದ ಕೂರೇಲು ನಿವಾಸಿ ಬಾಲಕೃಷ್ಣ ರೈ ಅವರ ಹಂಚಿನ ಮೇಲ್ಚಾವಣಿಯ ಮನೆಯ ಮೇಲೆ ಮನೆಯ ಪಕ್ಕದಲ್ಲಿರುವ ತೆಂಗಿನ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ. ತೆಂಗಿನ ಮರ ಮನೆಯ ಮೇಲ್ಚಾವಣಿಯ ಮೇಲೆ ಅಡ್ಡವಾಗಿ ಉರುಳಿ ಬಿದ್ದ ಪರಿಣಾಮವಾಗಿ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಹಾನಿಗೊಂಡಿದ್ದು, ಹಂಚುಗಳು ಹುಡಿಯಾಗಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ತೆಂಗಿನಮರ ಉರುಳಿ ಬಿದ್ದ ವೇಳೆ ಮೊಮ್ಮಕ್ಕಳ ಜತೆ ಮನೆಯೊಳಗಿದ್ದ ಬಾಲಕೃಷ್ಣ ರೈ ಅವರ ತಲೆಯ ಮೇಲೆ ಹಂಚಿನ ತುಂಡು ಬಿದ್ದು ಗಾಯವಾಗಿದೆ. ಮಕ್ಕಳ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಮನೆಯ ಮಾಡು ಸಂಪೂರ್ಣವಾಗಿ ಹಾನಿಗೊಂಡ ಹಾಗೂ ಗೋಡೆಗಳು ಬಿರುಕು ಬಿಟ್ಟಿರುವ ಪರಿಣಾಮವಾಗಿ ಮನೆಯಲ್ಲಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು,. ಬಾಲಕೃಷ್ಣ ರೈ ಅವರ ಕುಟುಂಬದ ಸದಸ್ಯರ ವಾಸ್ತವ್ಯವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಸರ್ಗಪ್ರಿಯ, ಕಂದಾಯ ನಿರೀಕ್ಷಕ ಗೋಪಾಲ್, ಆರ್ಯಾಪು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ವಾಗ್ಲೆ, ಮಾಜಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು,ಆರ್ಯಾಪು
ಗ್ರಾಮಕರಣಿಕರಾದ ಅಶ್ವಿನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.