ಸೃಜನಶೀಲ ಬರಹಗಳ ಮತ್ತು ಶಿಸ್ತುಗಳ ಅರಿವುಗಳನ್ನು ಹದವಾಗಿ ಸೇರಿಸಿದಾಗ ಕಾವ್ಯ ಅಂದವಾಗಿ ಅರಳುತ್ತದೆಃ ಹಾಸಿಂಪೀರ ವಾಲಿಕಾರ

ವಿಜಯಪುರ, ನ.9-ಕವಿಗಳು ಪ್ರಚಲಿತ ವಿಷಯವನ್ನು ವಿಸ್ತರಿಸಿ, ಸ್ವಾರಸ್ಯಕರವಾಗಿ ಬರೆದ ಬರಹ ಓದುಗರನ್ನು ಬೇಗನೆ ಮುಟ್ಟುತ್ತದೆ. ಸೃಜನಶೀಲ ಬರಹಗಳ ಮತ್ತು ಶಿಸ್ತುಗಳ ಅರಿವುಗಳನ್ನು ಹದವಾಗಿ ಸೇರಿಸಿದಾಗ ಕಾವ್ಯ ಅಂದವಾಗಿ ಅರಳುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಭಾನುವಾರ ಇಲ್ಲಿನ ಶ್ರೀಕೃಷ್ಣ ಮಠದ ಸಬಾಭವನದಲ್ಲಿ ನಡೆದ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉದ್ಘಾಟನೆ, ರಾಷ್ಟ್ರಮಟ್ಟದ ಸಮಾಜಸೇವಾ ಸಾಧಕ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಜಿಲ್ಲಾಮಟ್ಟದ ಕವಿಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳ ಪ್ರಬಲ ಮಾಧ್ಯಮ ಅಕ್ಷರ ಮಾಧ್ಯಮ. ಸಾಹಿತ್ಯ ಬುದ್ಧಿ, ಮನಸ್ಸುಗಳ ವರ್ಧಕವೂ ಆಗಿದೆ. ಅಂಥ ಗುಣಮಟ್ಟದ ಸಾಹಿತ್ಯ ಮನವನ್ನು ವಿಕಾಸಗೊಳಿಸುತ್ತದೆ ಎಂದರು.
ಮುಖ್ಯ ಅತಿಥಿ ಡಾ. ಆನಂದ ಕುಲಕರ್ಣಿ ಮಾತನಾಡಿ, ಸತತ ಓದು ಜ್ಞಾನ ಸಂಪತ್ತನ್ನು ಹೆಚ್ಚಿಸುತ್ತದೆ. ಕನ್ನಡದ ಶ್ರೀಮಂತ ಸಾಂಸ್ಕøತಿಕ ಪರಂಪರೆ ನಮ್ಮ ಜೀವನವನ್ನು ಬೆಳಗಿಸುತ್ತದೆ. ಯುವ ಕವಿಗಳು ಅಧ್ಯಯನಶೀಲರಾಗಿ ಉತ್ತಮ ಕವಿತೆಗಳನ್ನು ಕಟ್ಟಬೇಕು ಎಂದರು.
ಅತಿಥಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಗಿರಿಜಾ ಮಾಲಿಪಾಟೀಲ ಮಾತನಾಡಿ, ಸಾಹಿತಿಗಳಲ್ಲಿ ಭಾಷೆ, ಸಂಸ್ಕøತಿ, ವಿದ್ವತ್ತು ಇದ್ದರೆ ಎತ್ತರಕ್ಕೇರಬಲ್ಲರು. ಕವಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಕವಿತೆಗಳು ಸಮಾಜದ ಒಳಿತು, ಕೆಡುಕುಗಳನ್ನು, ನೋವು, ಸುಖ ನಿರಾಸೆಗಳನ್ನು ಪ್ರತಿಬಿಂಬಿಸಿದಾಗ ಸಮಾಜವಾದದ ಕಳಕಳಿ ಎದ್ದು ಕಾಣುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ವಿದ್ಯಾವತಿ ಅಂಕಲಗಿ ಕವಿ ಒಬ್ಬ ಸಮಾಜ ಜೀವಿ. ಅವನಿಗೆ ಆಗುವ ಅನುಭವಗಳನ್ನೆ ಕಾವ್ಯವಾಗಿಸುತ್ತಾನೆ. ಸಾಮಾಜಿಕ ನೆಲೆಯಲ್ಲಿ ಕಟ್ಟಿದ ಕವನ ಬಹುತೇಕರಿಗೆ ಇಷ್ಟವಾಗುತ್ತದೆ. ಮನಕ್ಕೆ ಮುದನೀಡುವ ಕಾವ್ಯಗಳು ಹೃದಯಗಳನ್ನು ಪ್ರಪುಲ್ಲಗೊಳಿಸುತ್ತವೆ ಎಂದರು.
ಇದೇ ವೇಳೆ ಬಬಲೇಶ್ವರದ ಸಮಾಜ ಸೇವಕ ನಾಗೇಶ ಭೋವಿ ಹಾಗೂ ಗೂಳಪ್ಪ ಯರನಾಳ ಇವರಿಗೆ ರಾಷ್ಟ್ರಮಟ್ಟದ ಸಮಾಜಸೇವಾ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಈರಣ್ಣ ಶಿರಮಗೊಂಡ, ಶಿಕ್ಷಕ ಮಲ್ಲಿಕಾರ್ಜುನ ನಾಯ್ಕೋಡಿ ಅವರನ್ನು ಸನ್ಮಾನಿಸಲಾಯಿತು.
ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನ ಸಾಧನೆ ಕುರಿತು ಜಿಲ್ಲಾಮಟ್ಟದ ಕವಿ ಸಮ್ಮೇಳನದಲ್ಲಿ ಪ್ರಿಯಾ ಹರಿದಾಸ, ಶಿವರಾಜ ಬಡಿಗೇರ, ಸವಿತಾ ಹಲಸಗಿ, ಕಲ್ಯಾಣರಾವ ದೇಶಪಾಂಡೆ, ಶ್ರೀರಂಗ ಪುರಾಣಿಕ, ರಾಹುಲ ಮರಳಿ, ಮಹಾದೇವಿ ಪಾಟೀಲ್, ಶಿವಾನಂದ ಹಿರೇಮಠ, ಈರಮ್ಮ ಬೋನೂರ, ಪ್ರಶಾಂತ ದೇಶಪಾಂಡೆ, ಶ್ರೀಶ ಹುಟಗಿ, ಪ್ರಕಾಶ ಜಹಗೀರದಾರ, ಪ್ರವೀಣ ಪತ್ತಾರ, ಸಂಗೀತಾ ಮಠಪತಿ, ಪ್ರಕಾಶ ಇನಾಮದಾರ, ವಸಂತರಾವ ಕೊರ್ತಿ, ಅಮರೇಶ ಎಂ.ಕೆ. ಕವನ ವಾಚಿಸಿದರು.
ತಾಲೂಕು ಘಟಕದ ನೂತನ ಪದಾಧಿಕಾರಿಗಳಾದ ಬಸನಗೌಡ ಬಿರಾದಾರ, ತಾರಾಮತಿ ಪಾಟೀಲ, ಈರಮ್ಮ ಬೋನೂರ, ಶಿವಾಜಿ ಮೋರೆ, ಯಮನೂರಪ್ಪ ಅರಬಿ, ಮಲ್ಲಿಕಾರ್ಜುನ ತೊದಲಬಾಗಿ, ಮಹಾದೇವಿ ಹತ್ತಿ ಅಧಿಕಾರ ಸ್ವೀಕರಿಸಿದರು. ವೇದಿಕೆಯ ಅಧ್ಯಕ್ಷ ಡಾ. ಮುರುಗೇಶ ಸಂಗಮ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಬಸನಗೌಡ ಬಿರಾದಾರ ನಿರೂಪಿಸಿದರು. ಮಲ್ಲಿಕಾರ್ಜುನ ತೊದಲಬಾಗಿ ವಂದಿಸಿದರು.