
ಕಲಬುರಗಿ:ಫೆ.23: ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾದರೆ ವ್ಯಕ್ತಿತ್ವ ವಿಕಸನವಾಗಲಾರದು. ಜೊತೆಗೆ ದೇಶಭಕ್ತಿ, ಗುರು-ಹಿರಿಯರಿಗೆ ಗೌರವ ನೀಡುವುದು, ಧೈರ್ಯ, ಸಾಹಸ, ಸೇವಾ ಮನೋಭಾವ, ನಾಯಕತ್ವದ ಗುಣಗಳು, ಶಿಸ್ತಬದ್ಧತೆ, ಸಮಯಪಾಲನೆ, ವಿಭಿನ್ನ ಆಲೋಚನಾ ಶಕ್ತಿಯಂತಹ ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕು. ಇಂತಹ ಗುಣಗಳು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಲು ಸೌಟ್ಸ್ & ಗೈಡ್ಸ್ ಪೂರಕವಾಗಿ ಕಾರ್ಯ ಮಾಡುತ್ತದೆ ಎಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಎಚ್‍ಡಬ್ಲ್ಯೂಬಿ ಗುರುಲಿಂಗಯ್ಯ ವಿಶ್ವನಾಥಮಠ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ 'ಜ್ಞಾನ ಚಿಗುರು ಟ್ಯೂಟೋರಿಯಲ್ಸ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ 'ವಿಶ್ವ ಸ್ಕೌಟ್ಸ್ & ಗೈಡ್ಸ್‍ನ ಸಂಸ್ಥಾಪನಾ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೆಡನ್ ಪೊವೆಲ್ ಅವರ ದೂರದೃಷ್ಟಿಯಿಂದ ಇಂಗ್ಲೆಂಡ್‍ನಲ್ಲಿ ಜನ್ಮತಾಳಿದ ಈ ಸಂಸ್ಥೆಯಿಂದು ವಿಶ್ವದ 240 ರಾಷ್ಟ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ. ಅಪತ್ಕಾಲದಲ್ಲಿ ಜನರ ಸೇವೆಯನ್ನು ಮಾಡುವ ಮೂಲಕ ಜನಮಾನಸದಲ್ಲಿದೆ. ಮೈಸೂರಿನ ಒಡೆಯರು ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ವ್ಯಾಪಕವಾಗಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆಯುವ ಮೂಲಕ ದೇಶಸೇವೆಯನ್ನು ಮಾಡಬೇಕೆಂದು ಕರೆ ನೀಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸ್ಕೌಟ್ಸ್ & ಗೈಡ್ಸ್‍ನಲ್ಲಿ 'ಅಸಹಾಯಕರ ಸೇವೆಯೊಂದಿಗೆ ದೇವರ ಸೇವೆ', 'ದೇಶ ಸೇವೆ', 'ವೈಯಕ್ತಿಕ ಹಿತ' ಎಂಬ ಮೂರು ಅಂಶಗಳಿವೆ. ಎಲ್ಲರೂ ಒಂದೇ ಎಂಬ ಪ್ರಮುಖ ತತ್ವ ಅಡಗಿದೆ. ಸ್ಕೌಟ್ಸ್ & ಗೌಡ್ಸ್ ಕೋಟಾದಡಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮಾಸ್ಟರ್ ಜಯಪ್ರಕಾಶ ಕಟ್ಟಿಮನಿ, ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ಮಲ್ಲಿಕಾರ್ಜುನ ಜಿ.ಬಂಗರಗಿ, ಕೇದಾರ ಕುಲಕರ್ಣಿ, ಗಿರಿಮಲ್ಲಪ್ಪ ದ್ಯಾಮಾಣಿ, ರಾಜ್ಯ ಕಬ್ಸ್ ಪ್ರಶಸ್ತಿ ಪುರಸ್ಕøತ ಯುವ ಕ್ರೀಡಾಪಟು ರೇಣುಕಾಚಾರ್ಯ ಜಿ.ವಿಶ್ವನಾಥಮಠ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.