ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಲು ಮನವಿ

ಕಲಬುರಗಿ,ಜ 20: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಅನುಚಿತ ಪದ ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ್ ಅವರು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಎಫ್‍ಆರ್‍ಐ ದಾಖಲಿಸುವಂತೆ ನಗರ ಪೊಲೀಸ್ ಕಮಿಷನರ್ ಆರ್ ಚೇತನ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ರಾಯಚೂರು ಜಿಲ್ಲೆ ಸಿರವಾರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಭಾಷಣದಲ್ಲಿ ಖರ್ಗೆ ಅವರನ್ನು ಅಯೋಗ್ಯ ಎಂದು ಹೇಳಿ ಜಾತಿಯ ಕಾರಣದಿಂದ ಅವಹೇಳನ ಮಾಡಿದ್ದಾರೆ.ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸೋಮಶೇಖರ ಹಿರೇಮಠ,ಭೀಮನಗೌಡ ಪರಗೊಂಡ ಇತರರಿದ್ದರು.