ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಷ್ಟೇ ಸತ್ಯ: ಸಿಎಂ

ಸಂಜೆವಾಣಿ ವಾರ್ತೆ
ಮಂಡ್ಯ: ಏ.18:- ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತವಾಗಿ ನುಡಿದರು.
ಮಂಡ್ಯ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ತಮ್ಮ ಮಗನನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಸಿದರು ಅವರು ಮುಖ್ಯಮಂತ್ರಿಯಾಗಿದ್ದರು ಸುಮಲತಾ ಅವರ ವಿರುದ್ಧ ಗೆಲುವು ಸಾಧಿಸಲು ಆಗಲಿಲ್ಲ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಶಾಸಕರು.ಅವರು ಅಲ್ಲೇ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು.ಆದರೆ ಸೋಲಿನ ಭಯದಿಂದ ಇಲ್ಲಿಗೆ ಬಂದು ಓಆಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಲ್ಲೂ ಖಚಿತವಾಗಿ ಸೋಲಿಸಲು ಮಂಡ್ಯ ಜಿಲ್ಲೆಯ ಜನತೆ ನಿರ್ಧರಿಸಿದ್ದಾರೆ.ಹೀಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಸ್ಪಷ್ಟವಾಗಿ ನುಡಿದರು.
ನರೇಂದ್ರ ಮೋದಿಯವರ ಅಚ್ಚೆ ದಿನ್ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ. ರಾಜ್ಯದ ಜನತೆಗೆ ಅಚ್ಚೆ ದಿನ್ ಕಾಣಿಸಿಯೇ ಇಲ್ಲ. ಮೋದಿಯವರ ಕಾರಣದಿಂದ ಏರಿಕೆಯಾಗಿದ್ದ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ-ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆ ಏರಿಕೆ ನೀತಿಯಿಂದ ಹೈರಾಣಾಗಿದ್ದ ರಾಜ್ಯದ ಜನರ ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಇದರಿಂದ ರಾಜ್ಯದ ಪ್ರತಿ ಕುಟುಂಬಗಳಿಗೆ, ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿ ಒದಗಿ ಬರುವಂಥಾ ನೆರವಿನ ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದರು.
ರಾಜ್ಯದ ಜನರಿಗೆ ಅನ್ನಭಾಗ್ಯದ ಅಕ್ಕಿ ಕೊಡ ಕೊಡದಂತೆ ಮೋದಿಯವರ ಕೇಂದ್ರ ಸರ್ಕಾರ ತೊಂದರೆ ಕೊಟ್ಟರೂ ಕೂಡ ನಾವು ಅಕ್ಕಿ ಜೊತೆಗೆ ಹಣವನ್ನೂ ನಮ್ಮ ಜನರ ಬದುಕಿಗೆ ಕೊಡುತ್ತಿದ್ದೇವೆ ಎಂದರು.
ಕೊಟ್ಟ ಮಾತಿನಂತೆ ನಡೆದುಕೊಂಡವರು ಯಾರು ಎನ್ನುವುದನ್ನು ನಿಮ್ಮ ಹೃದಯಕ್ಕೆ ಕೇಳಿ ಕೊಳ್ಳಿ. ಅವರಿಗೆ ಮಾತ್ರ ನಿಮ್ಮ ಮತ ನೀಡಿ. ರಾಜ್ಯದಲ್ಲಿ ಬಿಜೆಪಿಯಿಂದ ಗೆದ್ದ 27 ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ನೆಪಕ್ಕೂ ಧ್ವನಿ ಎತ್ತದೆ ರಾಜ್ಯದ ಜನರಿಂದ ಪಡೆದ ಮತಕ್ಕೆ ಅವಮಾನ ಮಾಡಿದರು. ಈ ಅವಮಾನಕ್ಕೆ ತಕ್ಕ ಉತ್ತರ ನೀಡಿ ರಾಜ್ಯದ ಜನತೆಯ ಪರವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಮಂಡ್ಯ ಜನತೆಯ ಸ್ವಾಭಿಮಾನಿ ತಾಕತ್ತನ್ನು ತೋರಿಸಿ ಎಂದು ಕರೆ ನೀಡಿದರು
ಪ್ರಸ್ತುತ ಸತ್ಯ ಮತ್ತು ಸುಳ್ಳಿನ ನಡುವೆ ಸಂಘರ್ಷ ನಡೆಯುತ್ತಿದೆ, ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷದ ಆಡಳಿತದಲ್ಲಿ ತಾವು ನೀಡಿದ್ದ ಭರವಸೆಯಲ್ಲಿ ಒಂದನ್ನು ಈಡೇರಿಸದ ಪ್ರತಿಯೊಬ್ಬರಿಗೂ 15 ಲಕ್ಷ ರೂ.ರೈತರ ಆದಾಯ ದ್ವಿಗುಣ ಸಾಲ ಮನ್ನಾ,ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದರು ಆದರೂ ಭರವಸೆಯನ್ನು ಈಡೇರಿಸಲಿಲ್ಲ ಎಂದು ದೂರಿದರು.
ಪ್ರಧಾನಿ ಮೋದಿಯವರು ಹೇಳಿದ್ದ ಮಾತಿನಂತೆ ನಡೆದುಕೊಂಡಿಲ್ಲ ಜಾತಿ ಧರ್ಮದ ಹೆಸರಿನಲ್ಲಿ ಜನರ ನಡುವೆ ವಿಷ ಬೀಜ ಬಿತ್ತಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಕೊಟ್ಟ ಮಾತಿನಂತೆ ನಡೆದುಕೊಂಡಿ
ರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಂIಅಅ ವರಿಷ್ಠ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ,ಡಿಸಿಎಂ,ಡಿ.ಕೆ.ಶಿವಕುಮಾರ್ , ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕರಾದ ಗಣಿಗ ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಕದಲೂರು ಉದಯ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಸಚಿವರಾದ ಬಿ.ಸೋಮಶೇಖರ್, ರಾಣಿ ಸತೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಎಐಸಿಸಿ ನಾಯಕ ರಾಹುಲ್ ಗಾಂಧಿ,ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಶ್ರೀರಾಮನವಮಿಯ ಶುಭಾಶಯಗಳನ್ನು ಮಂಡ್ಯದ ಜನತೆಗೆ ಮತ್ತು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ಕೋರಿ ಎಲ್ಲರೂ ಭಕ್ತಿ ಶ್ರದ್ದೆ ಮತ್ತು ಸಂಭ್ರಮದಿಂದ ರಾಮನವಮಿ ಆಚರಿಸುವಂತೆ ಕೋರಿದರು.