ಸೂರ್ಯ ಫೌಂಡೇಶನ್ ಪುಸ್ತಕ ಬಿಡುಗಡೆ, ಹೊಲಿಗೆ ಯಂತ್ರ ವಿತರಣೆ

ಬೀದರ, ಜ.12: ಸೂರ್ಯ ಫೌಂಡೇಶನ್‍ನ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿಯುಳ್ಳ ಆದರ್ಶ ಗ್ರಾಮ ಯೋಜನೆ ಪುಸ್ತಕವನ್ನು ಲೋಕಸಭೆ ಸದಸ್ಯರಾದ ಭಗವಂತ ಖೂಬಾ ಅವರು ರಾಚಪ್ಪ ಗೌಡಗಾಂವ್ ಗ್ರಾಮದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಉತ್ತಮ ಸಮಾಜದ ಏಳಿಗೆಗಾಗಿ ಸರಕಾರದ ಜೊತೆಗೆ ಅನೇಕ ಸಂಘ ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿವೆ. ಕಳೆದ ಎರಡು ದಶಕಗಳಿಂದ ಪದ್ಮಶ್ರೀ ಪುರಸ್ಕ್ರತ ಶ್ರೀ ಜಯಪ್ರಕಾಶ ಅಗ್ರವಾಲ್ ಅವರ ದೂರದೃಷ್ಟಿಯಿಂದಾಗಿ ಅವರ ಮಾರ್ಗದರ್ಶನದಲ್ಲಿ ಸೂರ್ಯ ಫೌಂಡೇಶನ್ ಸಂಸ್ಥೆಯು ಇಡಿ ದೇಶಾದ್ಯಂತ ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮ, ಮಹಿಳಾ ಮತ್ತು ಯುವ ಕ್ಷೇತ್ರವನ್ನು ಕೇಂದ್ರವನ್ನಾಗಿರಿಸಿಕೊಂಡು ಸೇವೆಗೈಯುತ್ತಿದೆ ಎಂದು ಹೇಳಿದರು.

ಸೂರ್ಯ ಫೌಂಡೇಶನ್‍ನ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ಮಾತನಾಡಿ, ಸೂರ್ಯ ಫೌಂಡೇಶನ್ ಬೀದರ ಜಿಲ್ಲೆಯಲ್ಲಿ ಸೇವಾ ಚಟುವಟಿಕೆಗಳನ್ನು ಕಳೆದ ವರ್ಷದಿಂದ ಪ್ರಾರಂಭಿಸಿ, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಕೊರೋನ ಮಹಾಮಾರಿಯ ಸಂದರ್ಭದಲ್ಲಿ ಎಚ್ಚರಿಕೆಯಿಂದ ಅನೇಕ ಸೇವಾ ಚಟುವಟಿಕೆಗಳನ್ನು ಮಾಡಿರುವುದು ಅಭಿನಂದನಾರ್ಹ ಎಂದರು.

ಹೊಲಿಗೆ ಯಂತ್ರಗಳ ವಿತರಣೆ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆತ್ಮನಿರ್ಭರ ಪರಿಕಲ್ಪನೆಯ ಅಡಿಯಲ್ಲಿ ಮಹಿಳೆಯರ ಸ್ವಾವಾಲಂಬಿ ಜೀವನಕ್ಕಾಗಿ ಫೌಂಡೇಶನ್ ವತಿಯಿಂದ ದಾಡೋಡಿ ತಾಂಡಾ ಹಾಗೂ ರಾಚಪ್ಪ ಗೌಡ್‍ಗಾಂವ್ ಗ್ರಾಮದಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಸಂಸದರಾದ ಭಗವಂತ ಖೂಬಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜ್ಞಾನ ಶಿವಯೋಗ ಆಶ್ರಮದ ಪೂಜ್ಯ ರಾಜಶೇಖರ ಶಿವಾಚಾರ್ಯರು, ವಿದ್ಯಾಭಾರತಿ ಪ್ರಮುಖರಾದ ಜಿ.ಆರ್ ಜಗದೀಶ, ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಗುರುನಾಥ ರಾಜಗೀರಾ, ಎನ್‍ಎಸ್‍ಎಸ್‍ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ್, ಸಂಘದ ಪ್ರಮುಖರಾದ ಮಂಜುನಾಥ ಸ್ವಾಮಿ, ಶಿವಲಿಂಗ ಕುಂಬಾರ, ವಿಜಯ ಮಹಾಂತೇಶ, ಸುಧಾಕರ ದೇಶಪಾಂಡೆ, ಶಿವಾನಂದ ದಾಡಗೆ, ಸೂರಜ್‍ಸಿಂಗ್ ರಜಪೂತ, ಮಾಜಿ ಶಾಸಕರಾದ ಎಂ.ಜಿ.ಮುಳೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮಾಕರ ಪಾಟೀಲ್, ಅನಿಲ ಭೂಸಾರೆ, ಮರಾಠಾ ಸಮಾಜದ ಮುಖಂಡರಾದ ಎಂ.ಜಿ ಮುಳೆ ಹಾಗೂ ಇತರರು ಉಪಸ್ಥಿತರಿದ್ದರು.