ಸೂರ್ಯ ಚಂದ್ರ ನಕ್ಷತ್ರಗಳಿಗೆ ಹೇಗೆ ಜಾತಿಯಿಲ್ಲವೋ ಹಾಗೆಯೇ ಶಿವಶರಣರಿಗೆ ಜಾತಿ ಇಲ್ಲ: ರಾಜಕುಮಾರ ಸಾಲಿ

ಭಾಲ್ಕಿ : ಮಾ.27:71ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ವಿಜಯಲಕ್ಷ್ಮಿ ಸೋಮನಾಥ ಹೊಸಾಳೆ ಬಸವೇಶ್ವರ ನಿಲಯ ಅಷ್ಟುರೆ ಕಲ್ಯಾಣ ಮಂಟಪ ಹಿಂದಿನ ರಸ್ತೆ ಗುರು ಕಾಲೋನಿ ಗಂಜ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಹಾಗೂ ಪೂಜ್ಯಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ವಹಿಸಿದ್ದರು. ಮಹಾಲಿಂಗ ದೇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೊಸಾಳೆ ಪರಿವಾರದವರು ಬಸವ ಗುರು ಪೂಜೆ ಸಲ್ಲಿಸಿದರು. ಸೋಮನಾಥ ಹೊಸಾಳೆ
ಸ್ವಾಗತಿಸಿದರು. ವೇದಿಕೆಯ ಮೇಲೆ ಪೂಜ್ಯ ಶ್ರೀ ಮಹಾಲಿಂಗ ದೇವರು, ಪೂಜ್ಯ ಶ್ರೀ ಶಿವಾನಂದ ದೇವರು ಅನುಭವ ಮಂಟಪ ಬಸವಕಲ್ಯಾಣ, ಶಂಭುಲಿಂಗ ಕಾಮಣ್ಣ ಭಾಲ್ಕಿ, ವಿಶ್ವನಾಥಪ್ಪಾ ಜೇ.ಇ. ಬಿರಾದಾರ, ಸುಭಾಷಚಂದ್ರ ದಾಡಗೆ, ಶಂಕರಪ್ಪ ವೀರಶಟ್ಟೆ ಉಪಸ್ಥಿತರಿದ್ದರು. ರಾಜಕುಮಾರ ಸಾಲಿ ಶಿಕ್ಷಕರು ಭಾಲ್ಕಿ ಅವರು ಶಿವ ಭಕ್ತರಿಗೆ ಜಾತಿ ಇಲ್ಲ ಎನ್ನುವ ವಿಷಯದ ಕುರಿತು ಮಾತನಾಡಿದರು. ಆದ್ಯ ವಚನಕಾರ ದೇವರ ದಾಸಿಮಯ್ಯನವರನ್ನು ಒಳಗೊಂಡು ಬಸವಾದಿ ಶರಣರು ತಮ್ಮ ಕಾಯಾ ವಾಚಾ ಮನಸಾ ಕಾರ್ಯಸಿದ್ಧಿ ಗಳಿಂದ ಬಹಳ ಎತ್ತರಕ್ಕೆ ಬೆಳೆದವರು, ಅವರೇನು ಉಚ್ಛ ಜಾತಿಗೆ ಸೇರಿದವರಲ್ಲ, ಅವರೆಲ್ಲರಿಗೂ ಚೈತನ್ಯ ಸ್ವರೂಪ, ಶಕ್ತಿ ಅಪ್ಪ ಬಸವಣ್ಣ. ಅದಕ್ಕಾಗಿ ನಾವು ಶಿವಭಕ್ತರಲ್ಲಿ ಕುಲವನ್ನು ಜಾತಿಯನ್ನು ಕಾಣಬಾರದು. ಏಕೆಂದರೆ ಶಿವಭಕ್ತರು ಎಲ್ಲವನ್ನು ಮೀರಿ ಬೆಳೆದು ಜಾತ್ಯಾತೀತರಾದವರು. ಅವರು ಯಾವುದೇ ಕುಲ ಗೋತ್ರ ಇವುಗಳಿಗೆ ಸಂಬಂಧಿಸದವರು. ಶಿವಭಕ್ತರು ಯಾರು ಎಂದರೇ, ಸತ್ಯವಂತರು ಶಿವಭಕ್ತರು, ಶಿವಭಕ್ತರು ದಾರ್ಶನಿಕರು , ಸತ್ಯ ಶುದ್ಧ ಕಾಯಕ ಮಾಡಿದವರು. ತ್ರಿಕರಣವನ್ನು ಅಳಿದವರು, ಕಾಯಾ, ವಾಚಾ ಮನಸಾ ಸತತ ಲಿಂಗಕ್ಕೆ ಸಮರ್ಪಿಸಿಕೊಂಡವರು, ಶಿವಭಕ್ತರು ಕಳ್ಳತನ ಮಾಡುವವರಲ್ಲ, ಕೊಲ್ಲುವ ವಿಚಾರದವರಲ್ಲ, ಸುಳ್ಳು ನುಡಿಯದವರು, ಅಂತರಂಗದಲ್ಲಿಯೂ ಶುದ್ಧರಾಗಿ ಬಹಿರಂಗದಲ್ಲಿಯೂ ಶುದ್ಧರಾಗಿದ್ದವರು ಶಿವಭಕ್ತರು ಅದಕ್ಕಾಗಿ ನಾವು ಜಾತಿ ಮತವನ್ನು ಅವರಲ್ಲಿ ಕಾಣುವುದು, ಎಣಿಸುವುದು ಅತ್ಯಂತ ಕನಿಷ್ಠಕರ. ಸೂರ್ಯ, ಚಂದ್ರ, ನಕ್ಷತ್ರ, ಬೆಳಕು, ನೀರು, ಗಾಳಿ, ನೆರಳು, ಸತ್ಯ, ಹಸಿವು, ನೀರಡಿಕೆ, ಸಮುದ್ರ, ನದಿ ಈ ಪ್ರಕೃತಿಗೆ ಯಾವುದಾದರೂ ಜಾತಿ ಇದೆಯೇ ಹೇಳಿ!? ಇಲ್ಲ. ಅದೇ ರೀತಿಯಲ್ಲಿ ಶಿವಭಕ್ತರು ಜಾತೀಯತೆ ವ್ಯವಸ್ಥೆಯನ್ನು ಮೀರಿ ತಮ್ಮ ಕಾಯಕವನ್ನು ಮಾಡುತ್ತಾ ಎತ್ತರಕ್ಕೆ ಬೆಳೆದವರು. ಸಂಸ್ಕಾರವಂತರು, ದೀಕ್ಷಾವಂತರು. ಅಷ್ಟಾವರಣವೇ ಅಂಗವಾಗಿ ಮಾಡಿಕೊಂಡು, ಪಂಚಾಚಾರವೇ ಪ್ರಾಣವನ್ನಾಗಿ ಮಾಡಿಕೊಂಡವರು ಶಿವಭಕ್ತರು. ಶಿವಶರಣರು ಅವರಲ್ಲಿ ಕುಲವನ್ನು ಜಾತಿಯನ್ನು ಕಾಣಬಾರದು ಎಂದು ಹೇಳಿದರು. ಪಾರ್ವತಿ ಚಂದ್ರಕಾಂತ ದೋಣಗಾಪುರೆ ಮತ್ತು ಮೀನಾಕ್ಷಿ ಪ್ರಭಾ ಅವರು ವಚನ ಪಠಣ ಹಾಗೂ ಬಸವ ಪ್ರಾರ್ಥನೆಯನ್ನು ನೆರವೇರಿಸಿದರು. ಹನುಮಂತ ಕಾರಾಮುಂಗೆ ಭಾಲ್ಕಿ ಅವರು ನಿರೂಪಿಸಿದರು. ವೇದಿಕೆಯ ಮೇಲಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಅನೇಕ ಶರಣ ಶರಣೆಯರು ಭಕ್ತರು ಭಾಗವಹಿಸಿದ್ದರು. ಮಂಗಲ ಹಾಗೂ ಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.