ಸೂರ್ಯಾಸ್ತ ಫೇವರಿಟ್ ಗುಂಡಾರಣ್ಯ

ಹೊಸಪೇಟೆ ಡಿ 31 : ಸಂಜೆಯ ರಂಗನ್ನು ಕಣ್ತುಂಬಿಕೊಳ್ಳಲು, ಸೂರ್ಯಾಸ್ತದ ವರ್ಣವೈಭವದ ಆಹ್ಲಾದಕ್ಕಾಗಿ ವರ್ಷಾಂತ್ಯದ ಫೇವರಿಟ್ ತಾಣವಾಗಿ ಗುಂಡಾರಣ್ಯ ಹಿನ್ನೀರು ಪ್ರದೇಶವು ಪ್ರವಾಸಿಗರನ್ನು ಸ್ಥಳಿಯರನ್ನು ಕೈಚಾಚಿ ಬರಮಾಡಿಕೊಳ್ಳುತ್ತಿದೆ.
ನಗರದಿಂದ 5-6 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗುಂಡಾರಣ್ಯ ಪ್ರದೇಶವು ಉದ್ಯಾನವನವನ್ನು ಮಾತ್ರ ಹೊಂದಿರುವುದಲ್ಲದೆ ತುಂಗಭದ್ರ ಜಲಾಶಯದ ಹಿನ್ನೀರನ್ನು ಹೊಂದಿದ್ದು ಸಂಜೆ ಸೂರ್ಯಾಸ್ತದ ಫೇವರಿಟ್ ಆಗಿದ್ದು, ಸೂರ್ಯಾಸ್ತದ ಸವಿಯನ್ನು ಅನುಭವಿಸಲು ಸ್ಥಳಿಯರು ಆಗಮಿಸುತ್ತಿದ್ದರೇ, ಹೆದ್ದಾರಿ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಸುರ್ಯಾಸ್ತದ ವೇಳೆ ಈ ಭಾಗಕ್ಕೆ ಬಂದರೆ ಒಂದು ಕ್ಷಣ ಇಲ್ಲಿ ನಿಂತು ಕಣ್ತುಂಬಿಕೊಳ್ಳದೇ ಮುಂದೆ ಸಾಗಲಾರರು. ಕುಟುಂಬಸ್ಥರೊಂದಿಗೆ ಉದ್ಯಾನವನಕ್ಕೆ ಬಂದು ಇಳಿಸಂಜೆ ವೇಳೆಯಲ್ಲಿ ಗಾಡವಾಗಿ ಮೌನದೊಂದಿಗೆ ಸೂರ್ಯಾಸ್ತಗೊಳ್ಳುವ ಸಂದರ್ಭದಲ್ಲಿ ಸುತ್ತಲಿನ ಪ್ರದೇಶವೆಲ್ಲವೂ ಆಶ್ಚರ್ಯಚಕಿತದ ಕಣ್ಣುಗಳೊಂದಿಗೆ ಬಣ್ಣದೊಳಗಿನ ಸೂರ್ಯನ ಪಶ್ಚಿಮ ಪಯಣಕ್ಕೆ ಸಾಕ್ಷಿಯಾಗುತ್ತಾರೆ.
ಇಲ್ಲಿನ ಪ್ರದೇಶದಲ್ಲಿ ಆಸನಗಳ ವ್ಯವಸ್ಥೆ ಕಲ್ಪಿಸಿ, ಹೆಚ್ಚಿನ ಮಟ್ಟದಲ್ಲಿ ಸೂರ್ಯಾಸ್ತದ ದೃಶ್ಯದ ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಹೆಚ್ಚಿನ ಅಭಿವೃದ್ಧಿ ಹೊಂದುವುದಲ್ಲದೇ ಪ್ರವಾಸಿಗರನ್ನು ಆಕರ್ಷಿಸುತ್ತದೆ.