
ಇಸ್ರೊಗೆ ಮತ್ತೊಂದು ಗರಿ
ಶ್ರೀಹರಿಕೋಟಾ,ಸೆ..೨- ಚಂದ್ರಯಾನ-೩ ರ ದೊಡ್ಡ ಯಶಸ್ಸಿನ ಮುಕುಟಮಣಿ ಧರಿಸಿರುವ ಇಸ್ರೊ ಈಗ ಸೂರ್ಯನ ಅಧ್ಯಯನದ ಆದಿತ್ಯ-ಎಲ್೧ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಯಶಸ್ಸಿನ ಗರಿಯನ್ನು ತನ್ನ ಮುಕುಟಕ್ಕೇರಿಸಿಕೊಂಡಿದೆ.
ಸೂರ್ಯನ ಅಧ್ಯಯನಕ್ಕಾಗಿ ಇಸ್ರೊ ಇಂದು ಬೆಳಿಗ್ಗೆ ೧೧ ಗಂಟೆ ೫೦ ನಿಮಿಷಕ್ಕೆ ಆದಿತ್ಯ-ಎಲ್೧ ವೀಕ್ಷಣಾ ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭೋ ಮಂಡಲಕ್ಕೆ ಕಳುಹಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.ಆದಿತ್ಯ-ಎಲ್ ೧ ಯಶಸ್ವಿಯಾಗಿ ಉಡ್ಡಯನಗೊಳ್ಳುತ್ತಿದ್ದಂತೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಮಾಯಿಸಿದ್ದ ವಿಜ್ಞಾನಿಗಳ ಮೊಗದಲ್ಲಿ ಸಂತಸದ ಹೊನಲು ಹರಿಯಿತು. ಉಡಾವಣೆ ಯಶಸ್ವಿಯಾಗುತ್ತಿದ್ದಂತೆಯೇ ವಿಜ್ಞಾನಿಗಳ ಕರತಾಡನ, ಹರ್ಷೋದ್ಗಾರ ಮುಗಿಲು ಮುಟ್ಟಿತು.
ಭಾರತದ ಮೊಟ್ಟ ಮೊದಲ ಸೂರ್ಯನ ಅಧ್ಯಯನ ಮಾಡುವ ಉಪಗ್ರಹ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಬಾಹ್ಯಾಕಾಶ ವಿಜ್ಞಾನಿಗಳು ನಿಟ್ಟಿಸಿರು ಬಿಟ್ಟಿದ್ದು, ಇನ್ನು ಮುಂದಿನ ದಿನಗಳಲ್ಲಿ ಸೂರ್ಯನ ಅಧ್ಯಯನ ಮಾಡುವ ಕಡೆಗೆ ಚಿತ್ತ ಹರಿಸಿದ್ದಾರೆ.
೧೨೫ ದಿನಗಳಿಗೂ ಹೆಚ್ಚು ಪ್ರವಾಸದ ಅವಧಿಯಲ್ಲಿ ಭೂಮಿಯಿಂದ ೧.೫ ದಶಲಕ್ಷ ಕಿ.ಲೋ ಮೀಟರ್ ದೂರದಲ್ಲಿರುವ ಸೂರ್ಯನ ಕಡೆಗೆ ರಾಕೆಟ್ ಪ್ರಯಾಣ ಬೆಳಸಿದೆ. ಒಮ್ಮೆ ರಾಕೆಟ್ ನಿಗದಿತ ಸ್ಥಳ ತಲುಪಿದ ನಂತರ ತನ್ನ ಅಧ್ಯಯನ ಮುಂದುವರಿಸಲಿದೆ.
ಆದಿತ್ಯ-ಎಲ್ ೧ ನೌಕೆ ಒಟ್ಟು ೭ ವೈಜ್ಞಾನಿಕ ಉಪಕರಣ ಹೊತ್ತು ಸೂರ್ಯನ ಶೋಧಕ್ಕೆ ತೆರಳಿದೆ. ಈ ಪೈಕಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡಲಿದೆ. ಉಳಿದ ಉಪಕರಣಗಳು ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡಲಿದೆ. ವಿಶೇಷವೆಂದರೆ ಆದಿತ್ಯ ಎಲ್೧ ರಲ್ಲಿರುವ ಉಪಕರಣಗಳು ಎಲ್೧ ಪಾಯಿಂಟ್‌ನಲ್ಲೇ ಸುತ್ತಲಿವೆ.ಸೂರ್ಯನಿಂದ ಹೊರಹೊಮ್ಮುವ ವಿನಾಶಕಾರಿ ಸೌರ ಬಿರುಗಾಳಿಗಳು, ಪ್ಲಾಸ್ಮಾ ಮತ್ತು ಜ್ವಾಲೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಚಂದ್ರನ ಮೇಲ್ಮೆನಲ್ಲಿ ರೋವರ್ ಇಳಿಸಿದ ಮಾದರಿಯಲ್ಲಿಯೇ ಸೂರ್ಯನ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಲು ಇಸ್ರೊ ವಿಜ್ಞಾನಿಗಳು ಸಜ್ಜಾಗಿದ್ದಾರೆ.೧೯೦ ಕೆಜಿ ತೂಕ ಹೊಂದಿರುವ ಆದಿತ್ಯ-ಎಲ್೧ ಉಪ್ರಗ್ರಹ ಸೂರ್ಯಮಂಡಲದಲ್ಲಿರುವ ಹಲವು ರಹಸ್ಯಗಳನ್ನು ಬಿಚ್ಚಿಡಲು ನೆರವಾಗಲಿದೆ. ವರ್ಷಗಳವರೆಗೆ ಸೇವೆ ಒದಗಿಸುತ್ತದೆ. ಇಂಧನ ಬಳಕೆಯ ಮಾದರಿಯನ್ನು ಅವಲಂಬಿಸಿ ಇದು ಹೆಚ್ಚು ಕಾಲ ಉಳಿಯುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ
ಸೂರ್ಯ ಹೈಡ್ರೋಜನ್ ಮತ್ತು ಹೀಲಿಯಂನ ದೈತ್ಯ ಗೋಳವಾಗಿದೆ. ಭೂಮಿಯ ಮೇಲಿನ ಜೀವಗಳಿಗೆ ಮೂಲವಾಗಿದೆ. ಭಾನುವಿನ ಗುರುತ್ವಾಕರ್ಷಣೆಯು ಸೌರ ಕುಟುಂಬದಲ್ಲಿನ ಎಲ್ಲಾ ಗ್ರಹಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು ಅದರ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು ಆದಿತ್ಯ ಸೂರ್ಯನತ್ತ ತೆರಳಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳ ಹರ್ಷಕ್ಕೆ ಕಾರಣವಾಗಿದೆ,ಸೂರ್ಯನಲ್ಲಿರುವ ವಿಕಿರಣಶೀಲತೆ, ಶಾಖ ಮತ್ತು ಚಾರ್ಜ್ ಕಣಗಳು ಸೂರ್ಯನಿಂದ ಬಿಡುಗಡೆಯಾಗುತ್ತವೆ. ಅದರ ಪ್ರಭಾವ ಭೂಮಿಯ ಮೇಲಿದೆ. ಸೂರ್ಯನಿಂದ ನಿರಂತರವಾಗಿ ಹರಿಯುವ ಕಣಗಳನ್ನು ಸೌರ ಮಾರುತ ಎಂದು ಕರೆಯಲಾಗುತ್ತದೆ. ಶಕ್ತಿಯುತ ಪೋರೀಟಾನ್‌ಗಳನ್ನು ಹೊಂದಿರುತ್ತದೆ. ಇಡೀ ಸೌರ ಕುಟುಂಬ ಈ ಗಾಳಿ ಮತ್ತು ಸೂರ್ಯನ ಕಾಂತೀಯ ಕ್ಷೇತ್ರದಿಂದ ಆವೃತವಾಗಿದ್ದು ಸೂರ್ಯನ ಅಂಗಳದಲ್ಲಿರುವ ಹಲವು ಕೌತುಕಗಳ ಅಧ್ಯಯನಕ್ಕೆ ಮುಂದಾಗಿದೆ,೧೯೮೯ ರಲ್ಲಿ, ಸೂರ್ಯನಿಂದ ಚಾರ್ಜ್ ಕಣಗಳ ದೊಡ್ಡ ಸ್ಫೋಟ ಕಂಡು ಬಂದಿತು. ಇದರಿಂದಾಗಿ ಕೆನಡಾದ ಕ್ವಿಬೆಕ್‌ನಲ್ಲಿ ೭೨ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ೨೦೧೭ ರಲ್ಲಿ, ಜ್ಯೂರಿಚ್ ವಿಮಾನ ನಿಲ್ದಾಣ ಸುಮಾರು ೧೫ ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.ಹೀಗಾಗಿ ಕಾಲಕಾಲಕ್ಕೆ ಸೂರ್ಯನ ದಿಕ್ಕಿನ ಮೇಲೆ ನಿಗಾ ಇಡುವುದು ಬಹಳ ಮುಖ್ಯವಾಗಿದೆ.
ಆದಿತ್ಯ ಮಾದರಿ
ಬೆಂಗಳೂರಿನ ನೆಹರು ತಾರಾಲಯದಲ್ಲಿ ಆದಿತ್ಯ-ಎಲ್೧ ಕುರಿತು ಸಾರ್ವಜನಿಕರಿಗೆ ಪರಿಚಯಿಸಲು ಮಾದರಿಯನ್ನು ಸಿದ್ದಪಡಿಸಲಾಗಿದೆ. ಈ ಮೂಲಕ ಜನರಿಗೆ ಆದಿತ್ಯ-ಎಲ್೧ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಆದಿತ್ಯ-ಎಲ್೧ ಉಡಾವಣೆಗೆ ಹೇಗೆ? ಇದು ಕಕ್ಷೆಗೆ ತಲುಪುವ ರೀತಿ, ಎಲ್೧ ಕಕ್ಷೆ ಎಂದರೇನು ಎಂಬ ಬಗ್ಗೆ ಮಾಹಿತಿಯನ್ನು ನೆಹರು ತಾರಾಲಯದಲ್ಲಿ ನೀಡಲಾಗುತ್ತದೆ.
ಸೌರ ಆಧಾರಿತ ಉಪಗ್ರಹ
ಆದಿತ್ಯ-ಎಲ್೧ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾ ಉಪಗ್ರಹವಾಗಿದೆ. ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೂರ್ಯನ ಜನನ, ಸೌರ ಗ್ರಹಣಗಳು ಮತ್ತು ಅಒಇ ಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಹೇಳಿದ್ದಾರೆ‘ಆದಿತ್ಯ-ಎಲ್ ೧ ನ ಮುಖ್ಯ ಸಾಧನ, ದಿನಕ್ಕೆ ೧೪೪೦ ಚಿತ್ರಗಳನ್ನು ರವಾನಿಸುತ್ತದೆ. ಅಂದರೆ ನಿಮಿಷಕ್ಕೆ ಒಂದು ಫೊಟೋ ಕಳುಹಿಸಿಕೊಡುವ ಸಾಮಥ್ರ್ಯ ಹೊಂದಿದೆ. ಆದಿತ್ಯ-ಎಲ್ ೧ ನಲ್ಲಿ ಇದು ಅತ್ಯಂತ ತಾಂತ್ರಿಕವಾಗಿ ಸಂಕೀರ್ಣ ಸಾಧನವಾಗಿದೆ.
- ಸೂರ್ಯನ ಅಧ್ಯಯನ ಮಾಡುವ ಸಾಹಸಕ್ಕೆ ಇಸ್ರೋ
- ಭಾರತದ ಮೊಟ್ಟ ಮೊದಲ ಆದಿತ್ಯ ಎಲ್- ೧ ಉಡಾವಣೆ ಯಶಸ್ಸಿ
- ಇಸ್ರೋ ವಿಜ್ಞಾನಿಗಳ ಮುಕುಟಕ್ಕೆ ಮತ್ತೊಂದು ಗರಿ
- ಸೂರ್ಯನ ಹೊರ ಭಾಗದಲ್ಲಿ ಸಮಗ್ರ ಅಧ್ಯಯನಕ್ಕೆ ಸಹಕಾರಿ
- ೧೨೫ ದಿನದ ಆದಿತ್ಯ ಎಲ್ -೧ ಉಪಗ್ರಹದ ಪ್ರಯಾಣ
,* ಭೂಮಿಯಿಂದ ೧.೫ ದಶಲಕ್ಷ ದೂರದಲ್ಲಿರುವ ಸೂರ್ಯನತ್ತ ಪ್ರಯಾಣ - ನಿಗದಿತ ಗುರಿ ತಲುಪಿದ ನಂತರ ಅಧ್ಯಯನ ಆರಂಭ
- ಚಂದ್ರಯಾನ-೩ ಯಶಸ್ಸಿನ ನಂತರ ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ
ಆದಿತ್ಯ ಯಶಸ್ವಿಗೆ ಸೋಮನಾಥ್ ಹರ್ಷ
ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್ -೧ ರ ಯಶಸ್ವಿ ಉಡಾವಣೆ ಕುರಿತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ.
“ಆದಿತ್ಯ ಎಲ್ ೧ ಬಾಹ್ಯಾಕಾಶ ನೌಕೆ ದೀರ್ಘವೃತ್ತದ ಕಕ್ಷೆಯಲ್ಲಿ ಸೇರಲಿದೆ ಈ ಮೂಲಕ ಪಿಎಸ್ ಎಲ್ ವಿ ಯಿಂದ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಆದಿತ್ಯ ಎಲ್ ೧ ಯಶಸ್ಸಿನ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು. ಆದಿತ್ಯ ಎಲ್ ೧ ಅನ್ನು ಸರಿಯಾದ ಕಕ್ಷೆಯಲ್ಲಿ ಇರಿಸಲು ಮಿಷನ್ ಸಹಕಾರಿಯಾಗಲಿದೆ ಎಂದಿದ್ದಾರೆ.
ಆದಿತ್ಯ-ಎಲ್ ೧ ಸೋಲಾರ್ ಮಿಷನ್ ಕುರಿತು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಖಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರುಕ್ಮಿಣಿ ಜಾಗೀರದಾರ್ ಪ್ರತಿಕ್ರಿಯಿಸಿ “ಇಸ್ರೋ ಎಷ್ಟು ದೂರ ಹೋಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಬಾಹ್ಯಾಕಾಶದಲ್ಲಿ ಸೂರ್ಯನ ಮೇಲೆ ನಿಗಾ ಇಡಲು ಆದಿತ್ಯ ಎಲ್ -೧ ಯಶಸ್ವಿಯಾಗಿ ಉಡಾವಣೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಅಮೇರಿಕಾ, ಯುರೋಪ್, ಜಪಾನ್‌ನ ಹಲವು ಉಪಗ್ರಹಗಳ ನಂತರ ಕೆಲವೇ ಕೆಲವು ದೇಶಗಳು ಸೂರ್ಯನನ್ನು ಅನ್ವೇಷಿಸಿವೆ. ಇದೀಗ ಭಾರತವೂ ಒಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ
ಪ್ರಧಾನಿ ಅಭಿನಂಧನೆ
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹೊಸ ಸಾಹಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂಧಿಸಿದ್ದಾರೆ.ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂಧಿಸಿದ್ದಾರೆ.
ಸಿಎಂ ಆಭಿನಂಧನೆ
ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್೧ ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ತುಂಬುಹೃದಯದ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಇದರೊಂದಿಗೆ ಸೂರ್ಯನ ಅಧ್ಯಯನ ನಡೆಸುವ ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದ್ದು, ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಕೋರಿದ್ದಾರೆ.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ವಿಜ್ಞಾನಿಗಳನ್ನು ಅಭಿನಂಧಿಸಿದ್ದಾರೆ.