ಸೂರ್ಯನಗರಿಯಲ್ಲೊಂದು ಹಸಿರು ಮನೆ..!

ಕಲಬುರಗಿ :ನ. 21:ಆತ ಒಬ್ಬ ಖ್ಯಾತ ಉದ್ಯಮಿ. ಮೇಲಾಗಿ ಪಕ್ಕದ ಮಹಾರಾಷ್ಟ್ರಿಂದ ಬಂದು ಸೂರ್ಯನಗರಿಯಲ್ಲಿ ನೆಲೆಸಿ ತಾನು ಒಂದು ಮನೆ ಕಟ್ಟುವ ಕನಸು ಹೊಂದಿದ್ದ. ಅದರಂತೆ ಆತ ಸುಂದರ ಮನೆ ಕಟ್ಟಿ ಇಡೀ ಕಲ್ಯಾಣ ಕರ್ನಾಟಕದ ಜನರಿಗೆ ಮಾದರಿಯಾಗಿದ್ದಾರೆ.
ಸಣ್ಣ ಜಾಗದಲ್ಲಿಯೇ ಹೀಗೆಲ್ಲ ಮನೆ ಮತ್ತು ಹಸಿರನ್ನು ಮಾಡಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ. ಅದು ಮನೆ ಇರೋದಾದರೂ ಎಲ್ಲಿ, ಆ ಮನೆಯಲ್ಲಿ ಏನೇನ್ ಇದೆ ಎನ್ನುವುದನ್ನು ತೋರಿಸ್ತೀವಿ. ಅದುವೇ ವಿಶೇಷ ಸೂರ್ಯನಗರಿಯ ಹಸಿರು ಮನೆ.
ಕಲ್ಯಾಣ ಕರ್ನಾಟಕ ಎಂದರೆ ಸಾಕು ಥಟ್ ಎಂದು ನೆನಪಾಗೋದು ಉರಿಬಿಸಿಲು. ಅದರಲ್ಲಿಯೂ ಕಲಬುರ್ಗಿ ಎಂದರೆ ಸಾಕು ಜನರ ಮೈ ಝಲ್ ಎನ್ನುತ್ತದೆ. ಬೇಡಿಗೆ ಬಂದರೆ ಸಾಕು ಬಿಸಿಲಿನ ತಾಪ ಹೆಚ್ಚಿ ಅದರ ಶೆಖೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಇತ್ತ ಕಡೆ ಜನ ಬರೋದಕ್ಕೂ ಸಹ ಹಿಂದೆ ಮುಂದೆ ನೋಡುತ್ತಾರೆ.
ಅಲ್ಲದೇ ಕಲಬುರ್ಗಿ ರಾಜ್ಯದಲ್ಲಿಯೇ ವಿಸ್ತೀರ್ಣದಲ್ಲಿ ಎರಡನೇ ಅತೀ ದೊಡ್ಡ ಜಿಲ್ಲೆಯಾಗಿದೆ. ಆದಾಗ್ಯೂ, ಇಲ್ಲಿ ಮಾತ್ರ ಕಣ್ಣು ಹಾಯಿಸಿದ ಕಡೆಯಲ್ಲ ಬರೀ ಬುರುಡಾಗಿ ಕಾಣುತ್ತದೆ. ಕಣ್ಣಿಗೆ ಹಸಿರು ಕಾಣುವುದೇ ಅಪರೂಪ. ಹಾಗಾಗಿಯೇ ಸಾಮಾನ್ಯವಾಗಿ ಇಲ್ಲಿ ಬಿಸಲಿನ ತಾಪ ಕೂಡ ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ. ಒಂದಿಂಚು ಜಾಗ ಕೂಡ ಲಕ್ಷ ಬೆಲೆ ಬಾಳುತ್ತದೆ. ಹಾಗಾಗಿ ಜನ ಒಂದಿಂಚು ಜಾಗ ಬಿಡದೇ ಜನ ಮನೆಯ ಹತ್ತಿರ ಮರ, ಗಿಡಗಳನ್ನು ಬೆಳೆಸದೇ ಮನೆ, ಕಾಂಪ್ಲೆಕ್ಸ್‍ಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಅಲ್ಲದೇ ದಿನನಿತ್ಯ ನಗರ ಬೆಳೆದಂತೆಲ್ಲ ಇದ್ದ ಮರಗಳನ್ನು ಕಡಿದು ಹಾಕಿ ರಸ್ತೆ ಅಗಲೀಕರಣ ಮತ್ತು ವಾಣಿಜ್ಯಕ ಉದ್ದೇಶಗಳಿಗೆ ಮಾಡಿಕೊಂಡು ಜನ ಹಸಿರನ್ನೇ ನಾಶ ಮಾಡುತ್ತಿದ್ದಾರೆ.
ಹೀಗಾಗಿ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತ ಹೋಗುತ್ತಿದೆ. ಅಲ್ಲದೇ ನಗರದಲ್ಲಿ ಸರಿಯಾದ ರಸ್ತೆಗಳಿಲ್ಲ. ಧೂಳಿನ ನಗರವಾಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಇದರಿಂದ ಜನರಿಗೆ ನಿತ್ಯ ಒಂದಿಲ್ಲೊಂದು ಅಲರ್ಜಿ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಈ ಭಾಗದಲ್ಲಿ ಕಲ್ಲು ಪ್ರದೇಶ ಹೆಚ್ಚಾಗಿರುವುದರಿಂದ ಇಲ್ಲಿ ಹೆಚ್ಚಾಗಿ ಕಲ್ಲು ಒಡೆಯುವ ಕಾಂಕ್ರಿಟ್ ಮಶಿನ್‍ಗಳು ಮತ್ತು ಸಿಮೆಂಟ್ ಕಾರ್ಖಾನೆಗಳು ಇರುವುದರಿಂದ ಇಲ್ಲಿನ ಜನರಿಗೆ ಶುದ್ಧ ಗಾಳಿ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನ ಬೇರೆ ಕಡೆಗಳಿಂದ ಇಲ್ಲಿಗೆ ಬರಲು ಹೆದರುತ್ತಾರೆ.
ಅಲ್ಲದೇ ಮರಗಿಡಗಳಿಲ್ಲದೇ ಇರುವುದರಿಂದ ಮಳೆಯಾಗುತ್ತಿಲ್ಲ, ಹೀಗಾಗಿ ಬೆಳೆಯೂ ಸಹ ಬರುತ್ತಿಲ್ಲ. ಇದರಿಂದ ಪದೇ ಪದೇ ಬರಗಾಲ ಬೀಳುತ್ತಿತ್ತು. ಈ ವರ್ಷ ಮಾತ್ರ ಕಳೆದ 40 ವರ್ಷಗಳ ಅವಧಿಯಲ್ಲಿನ ಅತಿವೃಷ್ಟಿ ಹಾಗೂ ನೆರೆ ಹಾವಳಿ ಸಂಭವಿಸಿದೆ. ಇದನ್ನು ಬಿಟ್ಟರೆ ಜನರು ಕುಡಿಯುವ ನೀರಿಗಾಗಿಯೂ ಪರದಾಡುವಂತಹ ಪರಿಸ್ಥಿತಿ ಇದೆ.
ಇಂತಹುದಲ್ಲಿ ಇಲ್ಲೊಬ್ಬರು ಇದೆಲ್ಲವನ್ನು ನಿವಾರಿಸಲು ಮತ್ತು ಜನರಿಗೆ ಇದರಿಂದ ಆಗುವ ಪರಿಣಾಮದ ಕುರಿತು ತಿಳುವಳಿಕೆ ನೀಡುತ್ತಾರೆ ಹಾಗೂ ಎಲ್ಲರಿಗೂ ಮಾದರಿಯಾಗುವಂತೆ ತಮ್ಮ ಸಣ್ಣ ಜಾಗದಲ್ಲಿಯೇ ಸರ್ಕಾರ ಮಾಡದಂತಹ ಕಾರ್ಯವನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮೋಹನ್ ಪಾಂಡೆ ಎಂಬ ಪರಿಸರ ಪ್ರೇಮಿಯು ಮೂಲತ: ಪಕ್ಕದ ಮಹಾರಾಷ್ಟ್ರದವರು. ಉದ್ಯಮಿಗಳು ಆಗಿದ್ದರಿಂದ ನಗರಕ್ಕೆ ಉದ್ಯಮ ಕೈಗೊಳ್ಳಲು ಆಗಮಿಸಿ ಕಳೆದ 30 ವರ್ಷಗಳಿಂದ ವಾಸವಾಗಿದ್ದಾರೆ. ಮೊದ, ಮೊದಲು ಕಡು ಬಿಸಿಲಿನ ಕೆಟ್ಟ ಅನುಭವವನ್ನು ಪಡೆದರು. ಬಿಸಿಲು ತಡೆದುಕೊಳ್ಳಲಾಗದಿದ್ದರೂ ಸಹ ತಮ್ಮ ಉದ್ಯಮ ಆರಂಭಿಸಿದರು. ಈ ಭಾಗದಲ್ಲಿ ಜೆಸಿಬಿಯ ಡೀಲರ್‍ಶಿಪ್ ಪಡೆದುಕೊಂಡು ವ್ಯವಹಾರವನ್ನು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಸಹ ದೊರಕಲಾರಂಭಿಸಿತು.
ಒಳ್ಳೆಯ ವ್ಯವಹಾರದಿಂದ ಪಾಂಡೆ ಅವರು ತಮ್ಮ ಮಕ್ಕಳನ್ನು ನಗರದಲ್ಲಿಯೇ ಶಾಲೆಗೆ ಹಾಕಿದರು. ಆಗಲೇ ಅವರಿಗೆ ನಾವು ಯಾವತ್ತಾದರೂ ಸ್ವಂತ ಮನೆಯನ್ನು ಕಟ್ಟಿದರೆ ಮನೆಯಲ್ಲಿಯೇ ಉದ್ಯಾನವನ ನಿರ್ಮಾಣ ಮಾಡಬೇಕೆಂಬ ಪಣ ತೊಟ್ಟರು. ಅಲ್ಲದೇ ಪುತ್ರ ಬೇರೆ ಅಮೇರಿಕಾದಲ್ಲಿ ಎಂಎಸ್ ಓದುತ್ತಿದ್ದಾನೆ. ಬೇರೆ ಎಲ್ಲಾದರೂ ಹೋಗಿ ನಿಶ್ಚಿಂತೆಯಿಂದ ಇರಬೇಕಾಗಿತ್ತು. ಆದಾಗ್ಯೂ, ತನಗೊಂದು ನೆಲೆ ಮತ್ತು ಯಶಸ್ಸು ತಂದುಕೊಟ್ಟ ಕರ್ಮಭೂಮಿ ಇದು. ಹೀಗಾಗಿ ನಾನು ಇಲ್ಲಿಯೇ ಇರಬೇಕು ಎಂದುಕೊಂಡು ನಗರದ ಘಾಟಗೆ ಲೇಔಟ್‍ನಲ್ಲಿ ಸುಮಾರು 2200 ಚದುರ ಅಡಿ ಜಾಗವನ್ನು ಖರೀದಿ ಮಾಡಿ ಮನೆ ನಿರ್ಮಿಸಲು ಮುಂದಾದರು.
ಅಲ್ಲದೇ ತಮ್ಮ ಮನೆಯನ್ನು ನಿರ್ಮಿಸುವುದಕ್ಕಿಂತ ಮುಂಚೆ ಜಾಗಕ್ಕೆ ಮಾರ್ಕೌಟ್ ಮಾಡಿ ಸುತ್ತಲೂ ಗಿಡಗಳನ್ನು ನಿರ್ಮಿಸಿ ನಂತರ ಮನೆ ಕಟ್ಟಲು ಆರಂಭಿಸಿದರು. ಮನೆಯಂದ್ರೆ ಅಷ್ಟು ಜಾಗದಲ್ಲಿ ಮನೆಯನ್ನು ಕಟ್ಟಿ ವಾಣಿಜ್ಯಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಹುದಿತ್ತು. ಆದಾಗ್ಯೂ, ಇಡೀ ಜಾಗದಲ್ಲಿ ಮುಕ್ಕಾಲು ಭಾಗ ಜಾಗದಲ್ಲಿ ಮಾತ್ರ ಮನೆಯನ್ನು ನಿರ್ಮಿಸಿ ಉಳಿದ ಜಾಗವನ್ನು ಸಂಪೂರ್ಣವಾಗಿ ಉದ್ಯಾನವನ ಮಾಡಿದ್ದಾರೆ. ಅಲ್ಲದೇ ಮನೆಯ ಸುತ್ತಮುತ್ತ ಎಲ್ಲಿ ನೋಡಿದರೂ ಸಹ ಕೇವಲ ಹಸಿರು ಮಾತ್ರ ಕಾಣಿಸುತ್ತದೆ. ಮನೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಬಗೆಯ ಹೂಗಳನ್ನು ಬೆಳೆಸಿದ್ದಾರೆ. ಅಲ್ಲದೇ ಅವುಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.
ಪಾಂಡೆ ಅವರು ಬೆಳಿಗ್ಗೆ ಎದ್ದ ಕೂಡಲೇ ಉದ್ಯಾನವನಕ್ಕೆ ಬಂದು ಯಾರಿಗೂ ಹೇಳದೇ ತಾವೇ ಸ್ವತ: ಉದ್ಯಾನವನ ಸ್ವಚ್ಛ ಮಾಡುತ್ತಾರೆ. ಕೆಲಸಕ್ಕಾಗಿ ಮನೆಯಲ್ಲಿ ಕೆಲಸಗಾರರನ್ನು ಇಟ್ಟುಕೊಂಡಿದ್ದರೂ ಸಹ ಸ್ವತ: ಉದ್ಯಾನವನದ ನಿರ್ವಹಣೆಯನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ. ಬೆಳಿಗ್ಗೆ ಎದ್ದು ಕಚೇರಿಗೆ ಹೋಗುವತನಕ ಉದ್ಯಾನವನದಲ್ಲಿಯೇ ಸ್ವಚ್ಛತಾ ಕಾರ್ಯವನ್ನು ಮಾಡುತ್ತಾರೆ. ಗಿಡಗಳನ್ನು ಸುಂದರವಾಗಿಡಲು ಕತ್ತರಿಸುವುದು, ಯಾವುದೇ ರೋಗಬಾಧೆ ಉಂಟಾಗದಿರಲು ಔಷಧ ಸಿಂಪಡಿಸುವುದು, ಎಲ್ಲ ಹೂವಿನ ಗಿಡಗಳಿಗೆ ನೀರು ಹಾಕುವುದು ಮಾಡುತ್ತಾರೆ.
ಕಚೇರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ರಾತ್ರಿವರೆಗೂ ಎಲ್ಲಿಯೂ ಹೋಗದೇ ಉದ್ಯಾನವನದಲ್ಲಿ ಕುಳಿತು ಕಾಲ ಕಳೆಯುತ್ತಾರೆ. ಯಾಕೆ ಹೀಗೆ ಮಾಡುತ್ತೀರಾ ಎಂದು ಯಾರಾದರೂ ಕೇಳಿದರೆ ಸಾಕು, ನಮಗೆ ಇಲ್ಲಿನ ಬಿಸಿಲು ತಡೆಯೋಕೆ ಆಗ್ಲಿಲ್ಲ. ಹಾಗಾಗಿ ಸ್ವಲ್ಪ ದಿನ ನಮಗೆ ಕಷ್ಟ ಆಯಿತು. ನಂತರ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡೆವು. ಆದಾಗ್ಯೂ, ಎಲ್ಲೋ ಒಂದು ಕಡೆ ನಾವು ನಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿದರೆ ಅಲ್ಲಿ ನಾವು ನಮ್ಮದೇ ಆದ ಒಂದು ಮನೆಯನ್ನು ನಿರ್ಮಿಸಿದರೆ, ನಾವು ಈ ಕಾರ್ಬನ್ ಡೈ ಆಕ್ಸೈಡ್‍ನಿಂದ ಸುರಕ್ಷಿತವಾಗಿರಬಹುದು ಎಂಬ ಕಾರಣಕ್ಕೆ ಉದ್ಯಾನವನ ನಿರ್ಮಿಸುವ ವಿಚಾರಕ್ಕೆ ಬಂದೆವು ಎಂದು ಹೇಳುತ್ತಾರೆ.
ಜಿಲ್ಲೆಯಲ್ಲಿ ಮರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಶುದ್ಧ ಗಾಳಿಯೂ ಸಿಗುತ್ತಿಲ್ಲ. ಅಲ್ಲದೇ ಹೊರಗಡೆ ಹೋದರೆ ಸುಡು ಬಿಸಿಲು ಇದೆ. ಇದರಿಂದಾಗಿ ನಾವು ನಮ್ಮ ಮನೆಯಲ್ಲಿಯೇ ಒಂದು ಸಣ್ಣ ಉದ್ಯಾನವನ ಮಾಡಿಕೊಂಡಿದ್ದೇವೆ. ನಮಗೆ ಈಗ ಗಿಡಗಳನ್ನು ಹಚ್ಚಿರುವುದರಿಂದ ಶುದ್ಧ ಗಾಳಿ ಬರುತ್ತದೆ. ಅಲ್ಲದೇ ಉದ್ಯಾನವನದಲ್ಲಿ ಬಂದು ಕುಳಿತರೆ ಸಾಕು ಮನಸ್ಸಿಗೆ ಒಂದು ರೀತಿಯ ಸಂತೋಷ ಸಿಗುತ್ತದೆ ಎಂದು ಮನೆಯವರು ಹೇಳುತ್ತಾರೆ.
ಕಳೆದ ಹಲವು ವರ್ಷಗಳಿಂದ ನಾವು ಇಲ್ಲಿಯೇ ಇದ್ದಿರುವುದರಿಂದ ಇಲ್ಲಿಯೇ ಇರಬೇಕು. ನಮ್ಮ ಬದುಕು ಕೊಟ್ಟ ನಗರದಲ್ಲಿಯೇ ನಾವು ಕೂಡ ಏನಾದರೂ ಮಾಡಬೇಕು ಎಂದು ನಾವು ಈ ರೀತಿ ಮಾಡಿದ್ದೇವೆ. ನಮ್ಮ ಮನೆಯಲ್ಲಿಯೇ ವಿವಿಧ ಹಣ್ಣುಗಳಾದ ನಿಂಬೆ ಹಣ್ಣು, ಸಪೋಟಾ, ದಾಳಿಂಬೆ, ಪೇರು, ನುಗ್ಗೆಕಾಯಿ, ನೆಲ್ಲಿಕಾಯಿ, ಅಂಜೀರಹಣ್ಣು ಮುಂತಾದ ಹಣ್ಣುಗಳನ್ನು ಸಹ ಬೆಳೆಸಿದ್ದೇವೆ. ಅಲ್ಲದೇ ಸುಮಾರು 100ಕ್ಕೂ ಹೆಚ್ಚು ಬಗೆಯ ಮಿನಿ ಪ್ಲೋರಾ, ಡಸಲ್, ಕ್ಯಾನಾ, ಯುವ ಪ್ಲೋರ್‍ಬಿಯಾ, 25 ಬಗೆ, ಬಗೆಯ ಹೂಗಳು, ಮಲ್ಲಿಗೆ, ಕೃಷ್ಣಕಮಲ, ವೆಯುಮೊ, ಕ್ಯಾಲಿಯಸ್, ಆಕಾಶಮಲ್ಲಿಗೆ, ನೈಟ್ ಕ್ವೀನ್, ದಾಲಿಯಾ, ಸೇವಂತಿ, ಭೋಗಂದಲ್ಲಿ, ನೆಗನೆಲ್ಸ್ ಜರಬೇರಾ, ಮುಸಂಡಾ, ಚಮೇಲಿ, ಚಂಪಾ ಮುಂತಾದ ತರಕಾರಿಗಳನ್ನೂ ಸಹ ಮನೆಯಲ್ಲಿಯೇ ಬೆಳೆಸಿರುವುದಾಗಿ ಪಾಂಡೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ತಾವು ಬೆಳೆದಿದ್ದ ತರಕಾರಿಯಿಂದಲೇ ಅಡುಗೆ ಮಾಡುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದ ಒತ್ತಡದಲ್ಲಿ ಇರುತ್ತೇವೆ. ಕಚೇರಿಯಿಂದ ಬಂದ ಮೇಲೆ ಉದ್ಯಾನವನದಲ್ಲಿ ಕುಳಿತರೆ ಸಾಕು ಎಲ್ಲವನ್ನೂ ಮರೆತು ಸುಖವಾಗಿ, ನೆಮ್ಮದಿಯನ್ನು ಕಾಣುತ್ತೇವೆ. ಸುತ್ತಮುತ್ತಲಿನ ಪ್ರದೇಶವು ಎಲ್ಲವೂ ವಾಣಿಜ್ಯಕ ಉದ್ದೇಶಗಳಿಗಾಗಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ನಾವು ಮನೆಯನ್ನು ಮಾತ್ರ ಯಾವುದೇ ಕಾರಣಕ್ಕೂ ವಾಣಿಜ್ಯಕ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಮನೆ ಕಟ್ಟುವಾಗ ಎಷ್ಟೋ ಜನರು ವಿಶಾಲವಾದ ಜಾಗವಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಸಲು ಹೇಳಿದರು. ಅದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಎಷ್ಟೇ ಹಣ ಗಳಿಸಿದರೂ ಮನಸ್ಸಿಗೆ ನೆಮ್ಮದಿ ಇಲ್ಲ ಎಂಬುದನ್ನು ಮನಗಂಡು ನನಗೆ ಹಣ ಮುಖ್ಯವಲ್ಲ ಎಂದುಕೊಂಡು ಮನೆಯಲ್ಲಿಯೇ ಉದ್ಯಾನವನ ನಿರ್ಮಿಸಿದ್ದೇವೆ ಎಂದು ಅವರು ತಿಳಿಸುತ್ತಾರೆ.
ನಾವು ಇಲ್ಲಿಯೇ ಪ್ಲಾಂಟೇಶನ್ ಮಾಡಿ ಮನೆಗೆ ಬಂದವರಿಗೆ ತಿಳುವಳಿಕೆ ಕೊಡುತ್ತೇವೆ. ಅಲ್ಲದೇ ಸಸಿಗಳನ್ನು ಕೇಳಿದರೆ ಅವರಿಗೆ ಉಚಿತವಾಗಿ ಕೊಡುತ್ತೇವೆ. ನಾವು ಕಲ್ಮಶ ಗಾಳಿಯನ್ನು ತೆಗೆದುಕೊಂಡು ರೋಗಕ್ಕೆ ತುತ್ತಾಗುತ್ತಿದ್ದೇವೆ. ಅಲ್ಲದೇ ಈ ಭಾಗದಲ್ಲಿ ಉದ್ಯಾನವನಗಳ ಕುರಿತು ಜನರಿಗೆ ಅರಿವಿಲ್ಲ. ಅವರು ತಮ್ಮ ಮನೆಯಲ್ಲಿ ಒಂದೊಂದು ಗಿಡಗಳನ್ನು ನೆಡಬೇಕು. ಎಷ್ಟೇ ಏನೇ ಇದ್ದರೂ ಅದರಿಂದ ಶುದ್ಧ ಗಾಳಿ ಮತ್ತು ತಂಪು ಇರದೇ ಇದ್ದರೆ ಏನೂ ಪ್ರಯೋಜನ ಇಲ್ಲ ಎಂದು ಪಾಂಡೆ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಾವು ಮನೆಗೆ ಬಂದವರಿಗೆ ಹಸಿರಿನ ಬಗ್ಗೆ ಮಾಹಿತಿ ನೀಡುತ್ತೇವೆ. ಅವರಿಗೆ ನಮ್ಮ ಮನೆಯಲ್ಲಿ ಇದ್ದ ಕೆಲ ಸಸಿಗಳನ್ನು ಸಹ ಕೊಡುತ್ತೇವೆ. ನಗರ ಹಸಿರಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಇಲ್ಲವಾದಲ್ಲಿ ಜನ ಬದುಕೋದು ಕಷ್ಟ ಆಗುತ್ತದೆ. ನಾನು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡಿದ್ದೇನೆ. ನನಗೆ ಕೆಲಸಗಾರ ಅಂತ ಅವರು ನಡೆದುಕೊಳ್ಳಲಿಲ್ಲ. ಮನೆ ಮಗನಂತೆ ನೋಡಿಕೊಳ್ಳುತ್ತಾರೆ. ನಾನು ಕೂಡಾ ಅವರೊಂದಿಗೆ ಉದ್ಯಾನವನ ನಿರ್ವಹಣೆ ಮಾಡುತ್ತೇನೆ. ಅಲ್ಲದೇ ಹಸಿರಿನ ಕುರಿತು ತಿಳಿದುಕೊಂಡಿದ್ದೇನೆ ಎಂದು ಕೆಲಸದ ಸಿಬ್ಬಂದಿ ಹೇಳುತ್ತಾರೆ.
ಪಾಂಡೆಯವರ ಮನೆಯಲ್ಲಿನ ಉದ್ಯಾನವನವನ್ನು ನೋಡಿದ ಸುತ್ತಮುತ್ತಲಿನವರೂ ಸಹ ತಮ್ಮ ಮನೆಗಳ ಮುಂದೆ ಮರಗಳನ್ನು ನೆಡಲು ಆರಂಭಿಸಿದ್ದಾರೆ. ಇದು ಪಾಂಡೆಯವರಿಗೆ ಮತ್ತಷ್ಟು ಸಂತೋಷವನ್ನು ನೀಡುತ್ತಿದೆ.