
ಸಂಜೆವಾಣಿ ವಾರ್ತೆಹೂವಿನಹಡಗಲಿ : ತಾಲೂಕಿನ ಇಟ್ಟಿಗಿ ಹೋಬಳಿಯ ಮಹಾಜನದಹಳ್ಳಿ, ತಳಕಲ್ಲು, ಮುಸುವಿನಹಳ್ಳಿ ಕಲ್ಲಹಳ್ಳಿ, ವರಕನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸೂರ್ಯಕಾಂತಿ ಬೆಳೆಗೆ ಎಲೆಚುಕ್ಕಿ ರೋಗಬಾಧೆ ವ್ಯಾಪಿಸಿರುವುದರಿಂದ ಕೃಷಿ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.ರೋಗ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಮನವಿಯ ಹಿನ್ನೆಲೆಯಲ್ಲಿ ರಾಯಚೂರು ಕೃಷಿ ವಿವಿಯ ಹಿರಿಯ ಕೃಷಿ ವಿಜ್ಞಾನಿ ಡಾ. ಎಂ.ಆರ್.ಗೋವಿಂದಪ್ಪ ಇಂದು ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.ಈ ಬಗ್ಗೆ ಹೆಚ್ಚಿನ ವೈಜ್ಞಾನಿಕ ವರದಿ ನೀಡಲು ಅಗತ್ಯವಾದ ಸೂರ್ಯಕಾಂತಿ ಗಿಡದ ಎಲೆಗಳನ್ನು ಸಂಗ್ರಹಿಸಿಕೊಂಡಿದ್ದು, ರೋಗದ ಕುರಿತು ಸಂಶೋಧನೆ ನಡೆಸಬೇಕಿದೆ. ಸದ್ಯ ಇರುವ ಬೆಳೆಗೆ ಎಲೆಚುಕ್ಕಿ ರೋಗ ನಿಯಂತ್ರಿಸಲು 2 ಗ್ರಾಂ ಜೈನೇಬ್ ಅಥವಾ 2 ಗ್ರಾಂ ಮ್ಯಾಂಕೋಜೆಬ್ ಅಥವಾ 1 ಮಿ.ಲೀ. ಟಿಬುಕೋನೋಜೋಲ್ ಶೀಲಿಂದ್ರ ನಾಶಕ ಸಿಂಪಡಿಸುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.ಇಟ್ಟಿಗಿ ಹೋಬಳಿಯೊಂದರಲ್ಲಿ ಎಲೆಚುಕ್ಕಿ ರೋಗದಿಂದ 128 ಹೆಕ್ಟೇರ್ ಪ್ರದೇಶದಲ್ಲಿಯ ಸೂರ್ಯಕಾಂತಿ ಬೆಳೆ ಹಾನಿಗೀಡಾಗಿದೆ. ರೈತರು ಬೆಳೆವಿಮೆ ಪರಿಹಾರ ಹಾಗೂ ಸರ್ಕಾರದ ಪರಿಹಾರ ಪಡೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್ ತಿಳಿಸಿದ್ದಾರೆ.