ಸೂರು ಕೊಡುವುದೇ ನನ್ನ ಮೊದಲ ಆದ್ಯತೆ

ಮೈಸೂರು: ಮೇ.19:- 25 ವರ್ಷದಿಂದ ಕ್ಷೇತ್ರದ ನಿವಾಸಿಗಳಿಗೆ ಸೂರು ಕಲ್ಪಿಸಿಕೊಡಲು ಆಗಿಲ್ಲ. ಹೀಗಾಗಿ ನನ್ನ ಆದ್ಯತೆ ಸೂರು ಇಲ್ಲದವರಿಗೆ ಸೂರು ನೀಡುವುದೇ ಮೊದಲ ಆದ್ಯತೆ ಆಗಿರಲಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.
ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಉದ್ಯೋಗ ಮೇಳವನ್ನು ಆಯೋಜನೆ ಮಾಡಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರತಿ ವರ್ಷ 8 ರಿಂದ 9 ಸಾವಿರ ವಿದ್ಯಾರ್ಥಿಗಳು ಪದವಿಯೊಂದಿಗೆ ಹೊರ ಬರುತ್ತಿದ್ದಾರೆ ಅವರಿಗೆ ಉದ್ಯೋಗ ನೀಡುವುದು ನನ್ನ ಕರ್ತವ್ಯವಾಗಿದ್ದು. ಅವರಿಗೆ ಮೇಳವನ್ನು ಆಯೋಜಿಸುತ್ತೇನೆ. ನಾನು ಕ್ಷೇತ್ರದಲ್ಲಿ ಪ್ರಚಾರದ ಸಮಯದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯ ದೃಷ್ಠಿಯಿಂದ ಹಿಂದೆ ಇದ್ದ ಶಾಸಕರು ಸಲಹೆ, ಸೂಚನೆಗಳನ್ನು ನೀಡಿದರೆ ಅದನ್ನು ಸ್ವಾಗತಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿಕೊಂಡು ಕೆಲಸ ಮಾಡೋಣ ಎಂದು ತಿಳಿಸಿದರು.
ಹುಕ್ಕ ಬಾರ್ ನಮ್ಮ ಸಂಸ್ಕೃತಿಯಲ್ಲ. ಹುಕ್ಕಾಬಾರ್ ಯಾರ ಕಾಲದಲ್ಲಿ ಪ್ರಾರಂಭವಾಯಿತು ಎಂದು ಪುರಾಮರ್ಶಿಸಿಕೊಳ್ಳಲಿ. ಕೇಂದ್ರ ಹಾಗೂ ರಾಜ್ಯಗಳಲ್ಲಿ ತಮ್ಮದೇ ಸರ್ಕಾರಗಳು ಆಡಳಿತ ನಡೆಸುತ್ತಿತ್ತು, ಅದನ್ನು ತಡೆಗಟ್ಟಬಹುದಿತ್ತು.
ಅದನ್ನು ಮಾಡದೇ ಹುಕ್ಕಾಬಾರ್ ನ ಸಂಸ್ಕೃತಿಯನ್ನು ರಾಜ್ಯದಲ್ಲಿ ಹುಟ್ಟು ಹಾಕಿದ್ದು, ಬಿಜೆಪಿಯ ಸಚಿವ ಅಶ್ವಥ್ ನಾರಾಯಣ ಅವರಾಗಿದ್ದಾರೆ. ಮೈಸೂರಿನಲ್ಲಿ ಕ್ಯಾಸಿನೋ ಸಂಸ್ಕೃತಿಯು ತಲೆ ಎತ್ತಿವೆ. ಕೆಲವೇ ದಿನಗಳ ಹಿಂದೆ ಬಿಜೆಪಿ ಸಚಿವ ಡಾ.ಅಶ್ವಥ್ ನಾರಾಯಣ ಅವರು ನನಗೆ ಕರೆ ಮಾಡಿ ಮೈಸೂರಿನಲ್ಲಿ ನನ್ನ ಸ್ನೇಹಿತ ಕ್ಯಾಸಿನೋ ನಡೆಸುತ್ತಿದ್ದಾನೆ ನೀನು ತೊಂದರೆ ಕೊಡಬೇಡ ಎಂದು ತಿಳಿಸಿದ್ದರು.
ನಾನು ಇದನ್ನು ವಿರೋಧಿಸಿ ಅಂದಿನ ನಗರ ಪೆÇಲೀಸ್ ಆಯುಕ್ತರ ಜತೆ ಚರ್ಚಿಸಿ ಧರಣಿ ನಡೆಸುವುದಾಗಿ ಹೇಳಿದ ಬಳಿಕ ಅದನ್ನು ತಡೆಯಲಾಗಿತ್ತು. ಆದರೆ, ಈಗಲೂ ಚಾಮುಂಡಿ ಬೆಟ್ಟದ ಕೆಳಗೆ ಜಯಲಕ್ಷ್ಮಿಪುರಂ ನಲ್ಲೂ ಕ್ಯಾಸಿನೋ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ತಡೆಯಲಾಗುವುದು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದು, ನಾನು ಭರವಸೆ ನೀಡಿರುವ ಅಷ್ಟನ್ನೂ ಜಾರಿಗೊಳಿಸಲು ಕ್ರಮವಹಿಸುತ್ತೇನೆಂದರು. ಮಾಜಿ ಶಾಸಕ ವಾಸು ಅವರು ಕಿದ್ವಾಯಿ ಆಸ್ಪತ್ರೆ ನಿರ್ಮಿಸುವ ಚಿಂತನೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಮೊನ್ನೆ ಜಿಲ್ಲಾಸ್ಪತ್ರೆ ಆರೋಗ್ಯಾಧಿಕಾರಿ ನನ್ನ ಜೊತೆ ಸಭೆ ನಡೆಸಿ ಆಸ್ಪತ್ರೆಗೆ ಉಪಕರಣಗಳು, ವೈದ್ಯರು, ದಾದಿಯರು ಸೇರಿದಂತೆ ಹಲವು ಅಗತ್ಯತೆಗಳ ಅನಿವಾರ್ಯವಿದ್ದು, ಸಮರ್ಪಕ ಸೇವೆ ಒದಗಿಸಲು ಕಷ್ಟವಾಗುತ್ತಿದೆ ಎಂದಿದ್ದಾರೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿ ಹಲವು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಕಟ್ಟಡಗಳ ಜೀರ್ಣೋದ್ದಾರಕ್ಕೆ ಹೆಚ್ಚಿನ ಅನುದಾನವನ್ನು ತರಲಾಗುವುದು. ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ನಮ್ಮ ನಾಯಕರು ಕ್ಯಾಬಿನೆಟ್ ರಚನೆಯಾದ ನಂತರದಲ್ಲೇ ಈಡೇರಿಸಲು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್, ಗೋಪಿ, ಶ್ರೀನಿವಾಸ್, ರಾಜೇಶ್ಚರಿ ಸೋಮು ಇತರರು ಇದ್ದರು.