ಸೂರಿ ಪತ್ರಕರ್ತರ ಎ ತಂಡಕ್ಕೆ ಸೌಹಾರ್ದ ಕ್ರಿಕೆಟ್ ಕಪ್

ಕೋಲಾರ.ಜು,೩- ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪತ್ರಕರ್ತ ಮಿತ್ರರ ಸೌಹಾರ್ದ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎ.ಜಿ.ಸುರೇಶ್‌ಕುಮಾರ್ ನೇತೃತ್ವದ ಎ ತಂಡ ಬಹಮಾನ ಮತ್ತು ಟ್ರೋಫಿಯನ್ನು ಗೆದ್ದುಕೊಂಡಿತು.
ಅಂತಿಮ ಪಂದ್ಯಾವಳಿಯಲ್ಲಿ ಪರಾಭವಗೊಂಡ ಓಂಕಾರಮೂರ್ತಿ ಸಾರಥ್ಯದ ಸಿ ತಂಡ ರನ್ನರ್‌ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕೋಲಾರ ನಗರದ ಪತ್ರಕರ್ತರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಆರಂಭಿಕ ಪಂದ್ಯವು ಓಂಕಾರ ಮೂರ್ತಿ ನಾಯಕತ್ವದ ಸಿ ಮತ್ತು ಹೆಚ್.ಪಿ. ಸುಧಾಕರ್ ನೇತೃತ್ವದ ಡಿ ತಂಡಗಳ ನಡುವೆ ಜರುಗಿತು. ಈ ಪಂದ್ಯಾವಳಿಯಲ್ಲಿ ಸಿ ತಂಡವು ೪ ವಿಕೆಟ್ ನಷ್ಟಕ್ಕೆ ೪೩ ರನ್‌ಗಳಿಸಿ ಗೆಲುವು ಸಂಪಾದಿಸಿದರೆ, ೬ ವಿಕೆಟ್ ನಷ್ಟಕ್ಕೆ ೪೨ ರನ್‌ಗಳಿಸಿದ ಡಿ ತಂಡವು ಸೋಲು ಅನುಭವಿಸಿತು.
೨ನೇ ಪಂದ್ಯದಲ್ಲಿ ಎ.ಜಿ.ಸುರೇಶ್‌ಕುಮಾರ್ ನೇತೃತ್ವದ ಎ ತಂಡವು ೩ ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿ ಗೆಲುವು ಸಂಪಾದಿಸಿತು. ಷಮ್ಗರ್ ನೇತೃತ್ವದ ಬಿ ತಂಡವು ೬ ವಿಕೆಟ್ ನಷ್ಟಕ್ಕೆ ೫೦ ರನ್ ಗಳಿಸುವ ಮೂಲಕ ಪರಾಭವಗೊಂಡಿತು.
ಮೂರನೇ ಪಂದ್ಯದಲ್ಲಿ ಡಿ ತಂಡವು ೬ ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿದರೆ ಬಿ ತಂಡವು ೫ ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿ ಗೆಲುವು ಸಂಪಾದಿಸಿತು.
ನಾಲ್ಕನೇ ಪಂದ್ಯ ಎ ಮತ್ತು ಬಿ ತಂಡಗಳ ನಡುವೆ ನಡೆದಿದ್ದು, ಈ ಸೆಮಿಫೈನಲ್ ಪಂದ್ಯದಲ್ಲಿ ಎ ತಂಡವು ೭ ವಿಕೆಟ್ ನಷ್ಟಕ್ಕೆ ೪೭ ರನ್ ಗೆಲುವು ಸಂಪಾದಿಸಿತು. ಬಿ ತಂಡವು ೬ವಿಕೆಟ್ ನಷ್ಟಕ್ಕೆ ೨೯ ರನ್ ಗಳಿಸಿ ಸೋಲು ಅನುಭವಿಸಿತು.
ಅಂತಿಮ ಫೈನಲ್ ಪಂದ್ಯದಲ್ಲಿ ಲಾಟರಿ ಮೂಲಕ ಫೈನಲ್‌ಗೆ ಬಂದಿದ್ದ ಸಿ ತಂಡ ಮತ್ತು ಸೆಮಿಫೈನಲ್‌ನಲ್ಲಿ ವಿಜೇತರಾದ ಎ ತಂಡಗಳ ನಡುವೆ ಅಂತಿಮ ಹಣಾಹಣಿ ನಡೆಯಿತು. ಮೊದಲು ಬ್ಯಾಟ್ ಮಾಡಿದ ಎ ತಂಡವು ೩ ವಿಕೆಟ್ ನಷ್ಟಕ್ಕೆ ೬೦ ರನ್ ಗಳಿಸಿತು. ರಘುರಾಜ್ ೧೮ ರನ್, ತಂಡದ ನಾಯಕ ಸುರೇಶ್‌ಕುಮಾರ್ ೨೭ ರನ್ ಗಳಿಸಿ ತಂಡವನ್ನು ಗೆಲುವಿನತ್ತ ತಲುಪಿಸಿದರು.
ಸಿ ತಂಡವು ೭ ವಿಕೆಟ್ ನಷ್ಟಕ್ಕೆ ೨೧ ರನ್ ಗಳಿಸಿ ಪರಾಭವಗೊಂಡು ಟೂರ್ನಿಯ ರನ್ನರ್ ಟ್ರೋಫಿ ಗೆದ್ದು ಕೊಂಡಿತು.
ಈ ಪಂದ್ಯದಲ್ಲಿ ಎ ತಂಡದ ವೇಣು ೪ ಕ್ಯಾಚ್ ಹಿಡಿದು ಗಮನಸೆಳೆದರು. ಬೋಲರ್‌ಗಳಾದ ದೀಪಕ್, ಸಮೀರ್‌ಗೆ ತಲಾ ೨ ವಿಕೆಟ್, ವೇಣು ಮತ್ತು ಮಹೇಶ್‌ಗೆ ತಲಾ ೧ ವಿಕೆಟ್ ಸಿಕ್ಕಿತು.
ಟೂರ್ನಿಯಲ್ಲಿ ಅತ್ಯುತ್ತಮ ಬೋಲರ್ ಆಗಿ ದೀಪಕ್ ಹೊರಹೊಮ್ಮಿದರು, ಅತ್ಯುತ್ತಮ ಬ್ಯಾಟ್ಸ್‌ಮೆನ್ ಆಗಿ ಕಿರಣ್ ಹಾಗೂ ಸರಣಿ ಪುರುಷೋತ್ತಮ್ ಆಗಿ ರಘುರಾಜ್ ವೈಯಕ್ತಿಕ ಟ್ರೋಫಿ ಗೆದ್ದುಕೊಂಡರು.
ಕೋಲಾರ,ಚಿಕ್ಕಬಳ್ಳಾಪುರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ವಿನ್ನರ್ ಮತ್ತು ರನ್ನರ್ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.
ಟೂರ್ನಿಯಲ್ಲಿ ಪಾಲ್ಗೊಂಡವರಿಗೆ ಪತ್ರಕರ್ತ ನವೀನ್ ಆರಾಧ್ಯರಿಂದ ತಿಂಡಿ ವ್ಯವಸ್ಥೆ, ಷಮ್ಗರ್‌ರಿಂದ ಪೆಂಡಾಲ್,ಕುರ್ಚಿ ವ್ಯವಸ್ಥೆ, ಶ್ರೀಹರಿ,ಶ್ರೀಕಾಂತ್,ಬಾಲು,ಅಯುಬ್‌ಖಾನ್ ಮತ್ತಿತರರಿಂದ ತಂಪುಪಾನೀಯಾ, ಕುಡಿಯುವ ನೀರು,ಕಾಫಿ,ಟೀ ವ್ಯವಸ್ಥೆಯಾಗಿತ್ತು. ಮಹೇಶ್,ರಾಜೇಂದ್ರಸಿಂಹ, ವೇಣು, ಆಸೀಫ್, ರವಿಕುಮಾರ್ ಮತ್ತಿತರರ ತಂಡದಿಂದ ಊಟ ಹಾಗೂ ಟೀಶರ್ಟ್,ಕ್ಯಾಪ್ ವ್ಯವಸ್ಥೆ ಮಾಡಿದ್ದರು. ಪತ್ರಕರ್ತ ಸಮೀರ್ ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಸಂಪಾದಕರ ಸಂಘದ ಅಧ್ಯಕ್ಷ ಹೆಚ್.ಎನ್.ಮುರಳಿಧರ್, ಕಾರ್ಯದರ್ಶಿ ಆರ್. ವೆಂಕಟೇಶ್‌ಬಾಬಾ, ಹಿರಿಯ ಪತ್ರಕರ್ತೆ ಗೋಪಿಕಾ ಮಲ್ಲೇಶ್, ರಾಜೇಂದ್ರ ಸಿಂಹ, ಮಾಮಿ ಪ್ರಕಾಶ್, ಸಿ.ಜಿ.ಮುರಳಿ, ಆಯುಬ್ ಖಾನ್ ಮತ್ತಿತರರು ಹಾಜರಿದ್ದರು.