ಸೂಪರ್ ಶಾಸಕ – ಆಪ್ತ ಸಹಾಯಕ

ದೇವದುರ್ಗ.ಮಾ.೨೩- ಸರ್ಕಾರದ ವಿವಿಧ ಇಲಾಖೆಯಿಂದ ಅಭಿವೃದ್ಧಿಗಾಗಿ ಬಂದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಶಾಸಕ ಕೆ.ಶಿವನಗೌಡ ನಾಯಕ ಅವರ ಆಪ್ತ ಸಹಾಯಕ ಪ್ರಭುಲಿಂಗ ಪಾಟೀಲ್ ತಾಲೂಕಿನಲ್ಲಿ ಸೂಪರ್ ಶಾಸಕರಂತೆ ವರ್ತಿಸುತ್ತಿದ್ದಾರೆ ಎಂದು ಯಮನೂರು ತಾ.ಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಗೋವಿಂದರಾಜ್ ನಾಯಕ ಚಿಕ್ಕಗುಡ್ಡ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಪ್ರತಿಯೊಂದು ಹಳ್ಳಿಗಳಿಗಳ ಜನರ ಮನೆಗೆ ಕುಡಿವ ನೀರು ತಲುಪಿಸುವ ದೃಷ್ಟಿಯಿಂದ ಜಾರಿಗೊಳಿಸಿರುವ ಜಲಜೀವನ ಯೋಜನೆ ಕೋಟ್ಯಂತರ ರೂ. ಅನುದಾನ ಬಂದಿದ್ದು, ಕೆಲಸ ಮಾಡದೆ, ಹಣ ಎತ್ತುವಳಿ ಮಾಡಿದ್ದಾರೆ ಎಂದು ದೂರಿದರು.
ವಿವಿಧ ಗ್ರಾಪಂ ವ್ಯಾಪ್ತಿಯ ಶಾಲೆಗಳಿಗೆ ಬಿಸಿಯೂಟ ಕೊಠಡಿ, ಕಾಂಪೌಂಡ್, ಅಂಗನವಾಡಿ ಕೇಂದ್ರ ಸೇರಿ ವಿವಿಧ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದೆ. ಇದರಲ್ಲಿ ೨೮ಕೋಟಿ ರೂ. ಬಿಒಸಿ ಮಾಡಿಸಿದ್ದು, ಇಬ್ಬರು ಏಜೆನ್ಸಿ ಮೂಲಕ ಹಣ ಪಡೆದಿದ್ದಾರೆ. ಸಿಂಧನೂರು ಮೂಲದ ಪಾಟೀಲ್ ಎಂಟರ್ ಪ್ರಸೆಸ್‌ಗೆ ೧೪ಕೋಟಿ ರೂ., ಸಿದ್ದಲಿಂಗಪ್ಪ ಅವರ ಎಜೆನ್ಸ್‌ಗೆ ೧೪ಕೋಟಿ ರೂ. ಸೇರಿ ಸುಮಾರು ೨೮.೭೨ಕೋಟಿ ರೂ. ಬಿಒಸಿ ಹಣ ನೀಡಲಾಗಿದೆ. ಆದರೆ, ಸರಿಯಾಗಿ ಕೆಲಸ ಮಾಡದೆ, ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಶಾಸಕರ ಆಪ್ತ ಸಹಾಯಕ ಪ್ರಭುಲಿಂಗ ಪಾಟೀಲ್, ತಾಪಂ ಎಡಿ ಬಸಣ್ಣ ನಾಯಕ ಸೇರಿ ಸುಮಾರು ೧೦ಕೋಟಿ ರೂ. ಹಣ ಬಿಒಸಿಯಲ್ಲಿ ಕಮಿಷನ್ ಆಗಿ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕರು, ಜಿಎಸ್‌ಟಿ ಹಾಗೂ ಪಿಡಿಒಗೆ ಕಮಿಷನ್ ನೀಡಬೇಕು ಎಂದು ವಿವಿಧ ಗ್ರಾಪಂ ಪಿಡಿಒಗಳಿಗೆ ಟಾರ್ಚ್‌ರ್ ನೀಡಿದ್ದಾರೆ. ಬಿಒಸಿಯಲ್ಲಿ ಕೋಟ್ಯಂತರ ರೂ.ಗೂ ಅಧಿಕ ಕಮಿಷನ್ ಪಡೆದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
೧೫ನೇ ಹಣಕಾಸು ಯೋಜನೆಯಡಿ ಪ್ರತಿ ಪಂಚಾಯಿತಿಗೆ ಲಕ್ಷಾಂತರ ರೂ. ನೀಡುವಂತೆ ಪಿಡಿಒಗಳಿಗೆ ಶಾಸಕರ ಆಪ್ತ ಸಹಾಯಕ ಒತ್ತಡ ಹೇರುತ್ತಿದ್ದು, ಇದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಆತ್ಮಹತ್ಯೆ ಮುಂದಾಗುವ ಸ್ಥಿತಿ ಎದುರಾಗಿದೆ. ಹಣದ ನೀಡದ ಪಿಡಿಒಗಳನ್ನು ಬೇರೆಡೆ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಕಾರ್ಯದರ್ಶಿಗಳನ್ನು ಪ್ರಭಾವಿಗಳನ್ನಾಗಿ ನೇಮಕ ಮಾಡುತ್ತಿದ್ದಾರೆ.
ಶಾಸಕರ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡುವವರ ಮೇಲೆ ಕ್ರಿಮಿನಲ್ ಕೇಸ್ ಹಾಕಿಸಿ ಬೆದರಿಕೆ ಹಾಕಲಾಗುತ್ತಿದೆ. ಅರಕೇರಾ ತಾಲೂಕು ರಚನೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಕೋಡಿಡ್ ನಿಯಮ ಉಲ್ಲಂಘನೆ ನೆಪದಲ್ಲಿ ನಾನು ತಾಪಂ ಸದಸ್ಯನಾಗಿದ್ದರೂ, ಜನಪ್ರತಿನಿಧಿ ಎನ್ನುವದನ್ನು ಮರೆತು ಪೊಲೀಸರ ಮೇಲೆ ಒತ್ತಡ ಹಾಕಿ ನನ್ನ ವಿರುದ್ಧ ಗುಂಡಾ ಕಾಯ್ದೆ ಓಪನ್ ಮಾಡಿಸಿದ್ದಾರೆ. ಅಲ್ಲದೆ ಹನುಂತ್ರಾಯ ಚಿಕ್ಕಗುಡ್ಡ, ಶಿವರಾಜ ಮಟ್ಲಾ ವಿರುದ್ಧವೂ ಗುಂಡಾ ಕಾಯ್ದೆ ತೆರೆಯಲಾಗಿದೆ. ನಾವೇನು ಮಟ್ಕಾ ನಂಬರ್ ಬರೆದಿಲ್ಲ, ಜೂಜಾಟ ನಡೆಸಿಲ್ಲ. ಆದರೂ ನಮ್ಮ ವಿರುದ್ಧ ಗುಂಡಾ ಕಾಯ್ದೆ ತೆರೆದಿರುವುದು ಖಂಡನೀಯ.
ಕೊತ್ತದೊಡ್ಡಿ ಗ್ರಾಪಂಯಲ್ಲಿ ವಿವಿಧ ಯೋಜನೆಯಡಿ ೭೮ಲಕ್ಷ ರೂ. ದುರ್ಬಳಕೆಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಕೆ.ಶಿವನಗೌಡ ನಾಯಕ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಆದರೆ, ಭ್ರಷ್ಟ ಅಧಿಕಾರಿಯನ್ನು ಆಪ್ತ ಸಹಾಯಕನಾಗಿ ನೇಮಕ ಮಾಡಿಕೊಂಡು ತಮ್ಮ ಹೆಸರಿಗೆ ಮಸಿಬಳಿದುಕೊಳ್ಳುತ್ತಿದ್ದಾರೆ.
ಶಾಸಕರು ತಮ್ಮ ಆಪ್ತ ಸಹಾಯಕ ವಿರುದ್ಧ ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ಮಾಡಿದರೆ, ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಗ್ರಾಪಂ ಸದಸ್ಯ ಆಂಜಿನೇಯ ಇದ್ದರು.